ಬೆಂಗಳೂರು: ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಸಂಖ್ಯೆ ಮಿತಿ ಮೀರಿದೆ. ಈ ಮಧ್ಯೆ ಅನ್ ಲಾಕ್ 5.0 ಕೂಡ ತೆರೆದುಕೊಂಡಿದೆ. ಈ ವೇಳೆ ಹಲವು ಕ್ಷೇತ್ರಗಳು ಓಪನ್ ಆಗಲಿದ್ದು, ಸಚಿವ ಸಿ.ಟಿ. ರವಿ ಒಂದಷ್ಟು ಸಲಹೆ ನೀಡಿದ್ದಾರೆ.
ಐದನೆ ಹಂತದ ಕೋವಿಡ್ ಅನ್ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಮತ್ತೊಂದಷ್ಟು ಸಡಿಲಿಕೆಗಳಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈ ಹಿನ್ನೆಲೆಯಲ್ಲಿ ಸ್ವಿಮ್ಮಿಂಗ್ ಪೂಲ್ಗಳು ಚಿತ್ರಮಂದಿರಗಳು ಕಾರ್ಯಾರಂಭ ಮಾಡಲಿವೆ.
ಇತ್ತ ಕೇಂದ್ರ ಹೊರಡಿಸಿರುವ ಆದೇಶವನ್ನು ಸ್ವಾಗತಿಸಿರುವ ರಾಜ್ಯ ಯುವಜನ ಕ್ರೀಡಾ ಸಚಿವ ಸಿ.ಟಿ.ರವಿ, ಕ್ರಿಡಾಪಟುಗಳಿಗೆ ಸುರಕ್ಷತೆಗೆ ಒತ್ತುಕೊಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೀಡಿದ ವಿನಾಯ್ತಿ ಸ್ವಾಗತಾರ್ಹ. ಆದರೆ ಈಜುಪಟುಗಳು ಈ ಬಗ್ಗೆ ಕಾಳಜಿ ವಹಿಸಬೇಕು. ಕೋವಿಡ್ ಟೆಸ್ಟ್ ಮಾಡಿಸಿಕೊಂಡೇ ಕೊಳಕ್ಕಿಳಿಯುವುದು ಉತ್ತಮ ಎಂದು ಹೇಳಿದ್ದಾರೆ. ಜೊತೆಗೆ ಸರ್ಕಾರ ವಿನಾಯ್ತಿ ನೀಡಿದರೂ ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆ. ಹೀಗಾಗಿ ನಿಮ್ಮ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ತರಬೇತಿಯಲ್ಲಿ ತೊಡಗಿಸಿಕೊಳ್ಳಿ ಎಂದಿದ್ದಾರೆ. ಇನ್ನು ಚಿತ್ರಮಂದಿರ ತೆರವಿನ ವಿಚಾರದಲ್ಲಿ ಮಾತನಾಡಿದ ರವಿ, ಚಿತ್ರರಂಗದವರ ಬಹುದಿನದ ಬೇಡಿಕೆ ಈಡೇರಿಕೆಯಾಗಿದೆ. ಚಿತ್ರೋದ್ಯಮಕ್ಕೂ ಇದರಿಂದ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.