ಉಡುಪಿ: ತೆಂಕು – ಬಡಗು ತಿಟ್ಟಿನ ಪ್ರಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ(71) ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಮಲ್ಪೆ ವಾಸುದೇವ ಸಾಮಗ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಇವರನ್ನ ತೆಂಕು-ಬಡಗು ತಿಟ್ಟಿನ ಯಕ್ಷಗಾನ ಪ್ರಕಾರದ ಸವ್ಯಸಾಚಿ ಎಂದೇ ಕರೆಯಲಾಗುತ್ತಿತ್ತು .ಅಮೃತೇಶ್ವರಿ ಮೇಳದ ಮೂಲಕ ವೃತ್ತಿರಂಗಕ್ಕೆ ಕಾಲಿಟ್ಟ ಸಾಮಗರು ಹಲವು ಹೊಸತುಗಳಿಗೆ ನಾಂದಿ ಹಾಡಿದರು. ಯಕ್ಷಗಾನದಲ್ಲಿ ಪ್ರಥಮ ಬಾರಿಗೆ ಕೋರ್ಟ್ ಸನ್ನಿವೇಶವನ್ನ ಸೃಷ್ಟಿ ಮಾಡಿದ ಕೀರ್ತಿ ವಾಸುದೇವ ಸಾಮಗರದು.
ಇವರು ವಾಕ್ಚಾತುರ್ಯ ಎಂತವರನ್ನೂ ಮೋಡಿ ಮಾಡುವಂತಿತ್ತು.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಮಲ್ಪೆ ವಾಸುದೇವ ಸಾಮಗ ಅವರ ಜೋಡಿವೇಷಗಳು ಇವರಿಬ್ಬರ ವಾಕ್ಪಟುತ್ವದಿಂದ ಯಕ್ಷಗಾನ ಲೋಕಕ್ಕೆ ಹೊಸ ಪ್ರೇಕ್ಷಕರನ್ನ ಕರೆತಂದವು.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರದ ಕೋಟೇಶ್ವರದ ತಮ್ಮ ಸ್ವಗೃಹದಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು.ಮೃತರ ಅಂತ್ಯಕ್ರಿಯೆ ಇಂದು ಧಾರ್ಮಿಕ ವಿಧಿವಿಧಾನದಂತೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.