ನವದೆಹಲಿ: ರೈಲ್ವೇ ಖಾತೆ ರಾಜ್ಯ ಖಾತೆಯ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೊರೋನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ.
ಕಳೆದ ವಾರ ಅವರಿಗೆ ಸೋಂಕು ತಗುಲಿತ್ತು. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಸುರೇಶ್ ಅಂಗಡಿ ಅವರು ವೈದ್ಯರ ಸಲಹೆಯಂತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಇಂದು ಈ ಚಿಕಿತ್ಸೆಗೆ ಸ್ಪಂದಿಸದೆ 65 ವರ್ಷದ ಸುರೇಶ್ ಅಂಗಡಿ ಅವರು ಮೃತಪಟ್ಟಿದ್ದಾರೆ. ಸುರೇಶ್ ಅಂಗಡಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4 ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಗೆಲುವು ಸಾಧಿಸಿದ್ದರು.
ಸಂಸತ್ ಅಧಿವೇಶನಕ್ಕೂ ಮುನ್ನ ಎಲ್ಲಾ ಸಂಸದರಿಗೂ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ ಸುರೇಶ್ ಅಂಗಡಿ ಅವರಿಗೆ ಸೋಂಕು ಪಾಸಿಟಿವ್ ಕಾಣಿಸಿಕೊಂಡಿತ್ತು.
ನಾನು #Covid19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ.
ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ.@PMOIndia
— Suresh Angadi (@SureshAngadi_) September 11, 2020
ಶ್ವಾಸಕೋಶದ ಸೋಂಕಿಗೆ ಗುರಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಸುರೇಶ್ ಅಂಗಡಿ ಅವರು ಪತ್ನಿ ಮಂಗಳ ಅಂಗಡಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಸುರೇಶ್ ಅಂಗಡಿ ಅವರನ್ನು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿದ್ದರು. ಆದರೆ ದುರದೃಷ್ಟವೆಂಬಂತೆ ಸುರೇಶ್ ಅಂಗಡಿ ಅವರು ಇಂದು ಕೋವಿಡ್ 19 ಸೋಂಕಿಗೆ ಬಲಿಯಾಗಿರುವುದು ಎಲ್ಲರಿಗೂ ಆಘಾತ ತಂದಿದೆ.
News In Brief: Union Minister of State for Railways #SureshAngadi succumbs to Covid-19 at AIIMS. He is the second parliament member to have succumbed to Covid-19 from Karnataka.