ರಾಜಸ್ಥಾನ: ಇಲ್ಲಿನ ಕರೌಲಿ ಜಿಲ್ಲೆಯ ಸಪೋತ್ರಾದ ಬುಕ್ನಾ ಗ್ರಾಮದಲ್ಲಿ ನಿನ್ನೆ(ಗುರುವಾರ) ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಾಗಶಃ ಸುಟ್ಟು ಹೋಗಿದ್ದ 50 ವರ್ಷದ ಅರ್ಚಕ ಬಾಬುಲಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.

ಈ ಕುರಿತು ಮಾಹಿತಿ ನೀಡಿರುವ ಕರೌಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚ್ವಾ, ಆಸ್ಪತ್ರೆಯಲ್ಲಿ ಅರ್ಚಕ ಬಾಬುಲಾಲ್ ನೀಡಿರುವ ಹೇಳಿಕೆಯನ್ನು ಆಧರಿಸಿ ಕೈಲಾಶ್ ಮೀನಾ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಬುಲಾಲ್ ಕಚ್ವಾ ಹೇಳಿಕೆ ಪ್ರಕಾರ, ಗ್ರಾಮದ ಪ್ರಭಾವಿ ಕುಟುಂಬದ ಕೈಲಾಶ್ ಮೀನಾ ಹಾಗೂ ಆತನ ಮಕ್ಕಳು ನಿನ್ನೆ ತಡರಾತ್ರಿ ಏಕಾಏಕಿ ದೇವಸ್ಥಾನದ ಆವರಣಕ್ಕೆ ನುಗ್ಗಿದರು. ಈ ವೇಳೆ ಜಮೀನಿಗೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಕೈಲಾಶ್ ಮೀನಾ ಮಕ್ಕಳು ದೇವಸ್ಥಾನದ ಬೇಲಿಗೆ ಬೆಂಕಿ ಹಚ್ಚಿದ್ದಾರೆ.

ಈ ವೇಳೆ ಬೆಂಕಿ ನಂದಿಸಲು ಪ್ರಯತ್ನಿಸಿದ ಅರ್ಚಕ ಬಾಬುಲಾಲ್ ಕೂಡ ಬೆಂಕಿಗೆ ಕೆನ್ನಾಲಿಗೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ಇನ್ನು ಕರೌಲಿ ಜಿಲ್ಲೆಯಲ್ಲಿ ನಡೆದಿರುವ ಅರ್ಚಕನ ಭೀಕರ ಕೊಲೆಗೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹರಿಹಾಯ್ದಿದ್ದಾರೆ.