ಉಡುಪಿ:ಎರಡು ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಹೆಸರಿನ ಬೋಟ್ ಒಂದು ಮಲ್ಪೆ ಕಡಲಿನಿಂದ ನಿಗೂಢವಾಗಿ ಕಣ್ಮರೆಯಾಗಿ ಅದರಲ್ಲಿದ್ದ ಸುಮಾರು 7 ಮಂದಿ ಮೀನುಗಾರರು ಮೃತಪಟ್ಟಿದ್ದರು. ಇದೀಗ ರಾಜ್ಯ ಸರ್ಕಾರ ಮೃತಪಟ್ಟ 7 ಮಂದಿ ಮೀನುಗಾರ ಕುಟುಂಬಗಳಿಗೆ ಹೆಚ್ಚುವರಿ 10 ಲಕ್ಷ ಪರಿಹಾರ ಘೋಷಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸುವರ್ಣ ತ್ರಿಭುಜ ಬೋಟು ಕಾಣೆಯಾಗಿತ್ತು. ಅದರಲ್ಲಿದ್ದ ಏಳು ಮಂದಿ ಮೀನುಗಾರರು ಕೂಡಾ ಕಣ್ಮರೆಯಾಗಿದ್ದರು. ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾಗಿತ್ತು .ಕಣ್ಮರೆಯಾದ ಬೋಟ್ ಗಾಗಿ ಹಲವು ತರಹದ ಹುಡುಕಾಟ ನಡೆದಿತ್ತು ಆದರೆ ಬೋಟ್ ಮಾತ್ರ ಸಿಕ್ಕಿರಲಿಲ್ಲ. ತದನಂತರ ಅದರಲ್ಲಿದ್ದ ಮೀನುಗಾರರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು.
ಈ ಸಮದಲ್ಲಿ ಸ್ಪಂದಿಸಿದ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ತಲಾ ₹ 10 ಲಕ್ಷ ರುಪಾಯಿ ಪರಿಹಾರ ನೀಡಿತ್ತು. ಆದರೆ ಅದೇ ವೃತ್ತಿಯನ್ನ ನಂಬಿಕೊಂಡು ಆ ಕುಟುಂಬಗಳ ಆಧಾರಸ್ತಂಭವಾಗಿದ್ದ ಅವರುಗಳು ಮರಣಿಸಿದ ನಂತರ ಅವರನ್ನೇ ನಂಬಿಕೊಂಡಿದ್ದ ಜೀವಗಳು ಜೀವನ ನಡೆಸುವುದು ದುಸ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹಣವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಮನವಿಯನ್ನ ಪುರಸ್ಕರಿಸದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಎರಡನೇ ಹಂತದ ಪರಿಹಾರ ಮೊತ್ತವಾಗಿ ಏಳೂ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ನೀಡಲಾಗಿದೆ.
ಕರ್ನಾಟಕ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ವಿಶೇಷ ಪ್ರಕರಣ ದಡಿಯಲ್ಲಿ ಹೆಚ್ಚುವರಿ ಪರಿಹಾರವಾಗಿ ತಲಾ 10 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಲ್ಲದೇ ಪರಿಹಾರ ಮಂಜೂರಾತಿಗೆ ವಿಶೇಷ ಮುತುವರ್ಜಿ ವಹಿಸಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರರ ಮುಖಂಡ ನಾಡೋಜ ಡಾ ಜಿ ಶಂಕರ್ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಕೆ ರಘುಪತಿ ಭಟ್ ಹಾಗೂ ಕರಾವಳಿಯ ಎಲ್ಲಾ ಶಾಸಕರಿಗೆ ಸಮಸ್ತ ಮೀನುಗಾರರ ಪರವಾಗಿ ಯಶ್ಪಾಲ್ ಸುವರ್ಣ ಮತ್ತು ಮೀನುಗಾರ ಕುಟುಂಬ ವರ್ಗದವರು ಕೃತಜ್ಞತೆ ಸಲ್ಲಿಸಿದ್ದಾರೆ