ಬೆಂಗಳೂರು: ಇನ್ಮುಂದೆ ಬೀದಿ ದೀಪಗಳು ಹಗಲು ಹೊತ್ತಿನಲ್ಲೂ ಉರಿಯುವುದು ನಿಲ್ಲಬಹುದು. ಈ ಮೂಲಕ ವಿದ್ಯುತ್ ನಷ್ಟ ಹಾಗೂ ಆರ್ಥಿಕ ನಷ್ಟ ಕೊನೆಯಾಗಬಹುದು.
ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳನ್ನು ಒಂದೇ ಸ್ವಿಚ್ ಮೂಲಕ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಿದೆ. ಸಾಫ್ಟ್ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಯೋಜನೆಯ ಪ್ರಕಾರ ಸಾಫ್ಟ್ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದೇ ಕಡೆ ಕುಳಿತು ಇಡೀ ನಗರದ ಬೀದಿ ದೀಪಗಳನ್ನು ಆಪರೇಟ್ ಮಾಡಬಹುದು. ಸಂಜೆ ಹೊತ್ತಿಗೆ ಬೀದಿ ದೀಪ ಆನ್ ಮಾಡಿದರೆ ಇಡೀ ನಗರದಲ್ಲಿನ ಬೀದಿ ದೀಪಗಳು ಉರಿಯುತ್ತವೆ. ನಂತರ ಬೆಳಗ್ಗೆ ಆಫ್ ಮಾಡಿದರೆ ನಗರದ ಎಲ್ಲಾ ಬೀದಿ ದೀಪಗಳು ಆಫ್ ಆಗುತ್ತವೆ.
ಈ ಯೋಜನೆಯನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ಹತ್ತು ಜಿಲ್ಲೆಗಳಲ್ಲಿ ಜಾರಿಗೆ ತರಲು ಚಿಂತನೆ ನಡೆದಿದೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು, ಮೈಸೂರು, ಕಲಬುರ್ಗಿ, ಬಳ್ಳಾರಿ ವಿಜಯಪುರ, ಮಂಗಳೂರು ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಎಲ್ಲಾ ಕಡೆ ಜಾರಿಗೆ ಬರಲಿದೆ.