ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ನಿನ್ನೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಏರಿಕೆಯಾತ್ತಿವೆ ಎಂದು ಆರೋಪಿಸಿದ್ದರು. ಈ ಬಗ್ಗೆ ಎನ್ ಸಿ ಡಬ್ಲ್ಯೂ ಟ್ವೀಟ್ ಮಾಡಿ, ನಮ್ಮ ಅಧ್ಯಕ್ಷೆ ರೇಖಾ ಶರ್ಮಾ ಅವರು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ರಾಜ್ಯದ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು. ಕಾರ್ಯ ನಿರ್ವಹಿಸದೇ ಇರುವ ಒನ್ ಸ್ಟಾಪ್ ಕೇಂದ್ರಗಳು, ಕೊರೊನಾ ಆರೈಕೆ ಕೇಂದ್ರಗಳಲ್ಲಿ ಮಹಿಳಾ ರೋಗಿಗಳ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದ ಬಗ್ಗೆ ಚರ್ಚೆಸಿದ್ದಾರೆ. ಜೊತೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದರು. ಆದ್ರೆ ಈ ಬಗ್ಗೆ ರೇಖಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಈ ಬಗ್ಗೆ ರೇಖಾ ಶರ್ಮಾ ಮಾತಾಡಿದ ಬೆನ್ನಲ್ಲೇ, ಅವರ ಹಳೆಯ ಟ್ವೀಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ರಾಜಕೀಯ ಮುಖಂಡರು ಮತ್ತು ಅವರ ಕುಟುಂಬಗಳ ವಿರುದ್ಧ ರೇಖಾ ಶರ್ಮಾ ಈ ಹಿಂದೆ ಮಾಡಿದ್ದ ಅವಹೇಳನಕಾರಿ, ಮಹಿಳೆಯರ ವಿರುದ್ಧವೇ ಸೆಕ್ಸಿಸ್ಟ್ ಮತ್ತು ದ್ವೇಷಪೂರಿತ, ನಿಂದನಾತ್ಮಕ ಟ್ವೀಟ್ಗಳನ್ನು ನೆಟ್ಟಿಗರು ಈಗ ಹಂಚಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.
ರೇಖಾ ಶರ್ಮಾ ತಮ್ಮ ಹಳೆಯ ಟ್ವೀಟ್ಗಳಲ್ಲಿ ಮಾಜಿ ಪ್ರಧಾನಿ ನೆಹರೂ, ಕಾಂಗ್ರೆಸ್ ಮುಖ್ಯಸ್ಥೆ ಪ್ರಿಯಾಂಕಾ ಗಾಂಧಿ, ಆಪ್ ಮುಖಂಡರು ಸೇರಿದಂತೆ ಹಲವರ ಬಗ್ಗೆ ತುಂಬಾ ಕೀಳು ಮಟ್ಟದ ಕಾಮೆಂಟ್ಗಳನ್ನು ಹಾಕಿದ್ದರು.
ಇಂತಹ ಅತಿರೇಕದ ಟ್ವೀಟ್ಗಳನ್ನು ಮಾಡಿದ್ದವರು ಇಂದು ಮಹಿಳೆಯರ ಸುರಕ್ಷತೆ ಬಗ್ಗೆ, ಲವ್ ಜಿಹಾದ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದೂ, ಅವರು ಈ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದೂ ಹಲವು ಮಂದಿ ಒತ್ತಾಯಿಸಿದ್ದಾರೆ. #SackRekhaSharma ಎಂಬ ಹ್ಯಾಶ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿದೆ.