ಶಾರ್ಜಾ : 13 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇಂದು ಬಲಾಢ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಉತ್ತಮ ಫಾರ್ಮ್ ನಲ್ಲಿದೆ. ಆದ್ದರಿಂದ 3 ವರ್ಷಗಳ ಬಳಿಕ ಈ ಬಾರಿಯಾದರೂ ಪ್ಲೇ ಆಫ್ ಹಂತಕ್ಕೇರುತ್ತಾ ಎಂದು ಆರ್ ಸಿಬಿ ಅಭಿಮಾನಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.
ಬೆಂಗಳೂರು ತಂಡ ಆಡಿರುವ 12 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ . ಆದ್ದರಿಂದ ಇಂದಿನ ಪಂದ್ಯವನ್ನ ಗೆದ್ದರೆ ಕೊಹ್ಲಿ ಬಳಗ ಮುಂದಿನ ಹಂತಕ್ಕೇರುವುದು ಖಚಿತ. ಆದರೆ ಕಳೆದೆರಡು ಪಂದ್ಯಗಳಲ್ಲಿ ಸೋತಿರುವುದರಿಂದ ಇಂದಿನ ಪಂದ್ಯದ ಮೇಲೆ ಕೊಹ್ಲಿ ಬಳಗಕ್ಕೆ ಒತ್ತಡ ಹೆಚ್ಚಾಗಿದೆ. ಆದರೆ ಆರ್ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಬಲವಾಗಿದ್ದು ಎಬಿಡಿ, ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಿದೆ.
ಇನ್ನು ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಇಂದಿನ ಪಂದ್ಯ ಮಹತ್ವಪೂರ್ಣವಾಗಿದ್ದು ಗೆಲ್ಲಲೇ ಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ. ಇಂದಿನ ಪಂದ್ಯ ಗೆದ್ದರಷ್ಟೇ ಹೈದ್ರಾಬಾದ್ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.ಆಡಿರುವ 12 ಪಂದ್ಯಗಳಲ್ಲಿ ಕೇವಲ 5 ರಲ್ಲಿ ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಆದರೆ ಉತ್ತಮ ರನ್ ರೇಟ್ ಹೊಂದಿರುವ ಕಾರಣ ಇಂದಿನ ಪಂದ್ಯ ಗೆದ್ದರೆ ಹೈದ್ರಾಬಾದ್ ತಂಡಕ್ಕೇ ಪ್ಲೇ ಆಫ್ ಪ್ರವೇಶ ಖಚಿತ ಎನ್ನಲಾಗುತ್ತಿದೆ.