ಗೋವಾ: ಈರುಳ್ಳಿ ದರ ಇದೀಗಾಗಲೇ ಗಗನಕ್ಕೇರಿದೆ. ಈರುಳ್ಳಿ ದರ ಕೆಜಿ ಗೆ ಸುಮಾರು ₹100 ರ ಆಸುಪಾಸಿನಲ್ಲಿದೆ. ಇಂತಹ ಸಮಯದಲ್ಲಿ ಗೋವಾ ಸರ್ಕಾರ , ಪಡಿತರ ಚೀಟಿ ಹೊಂದಿರುವುವರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಪೂರೈಸಲು ನಿರ್ಧರಿಸಿದೆ.
ಗೋವಾ ಸರ್ಕಾರ ಮಹಾರಾಷ್ಟ್ರದ ನಾಶಿಕ್ ನ ರಾಷ್ಟ್ರೀಯ ಸಹಕಾರಿ ಮಾರಾಟ ಒಕ್ಕೂಟ ದಿಂದ 1045 ಮೆಟ್ರಿಕ್ ಟನ್ ಈರುಳ್ಳಿಯನ್ನು ಖರೀದಿಸಿದೆ. ಈ ಈರುಳ್ಳಿಯನ್ನು 3.5ಲಕ್ಷ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ಕೆ.ಜಿ ಗೆ ₹32 ರೂ ಗಳ ದರದಲ್ಲಿ 3 ಕೆ.ಜಿ ಈರುಳ್ಳಿ ವಿತರಿಸಲು ಗೋವಾ ಸಂಪುಟ ನಿರ್ಧಾರ ಕೈಗೊಂಡಿದೆ.
ಅತಿವೃಷ್ಠಿಯಿಂದಾಗಿ ಈ ಬಾರಿ ರೈತರು ಬೆಳೆದಿರುವ ಈರುಳ್ಳಿ ಬೆಳೆ ನೀರುಪಾಲಾಗಿದೆ. ಸಮರ್ಪಕವಾಗಿ ಈರುಳ್ಳಿ ಮಾರುಕಟ್ಟೆ ಪ್ರವೇಶಿಸದ ಕಾರಣ ಈರುಳ್ಳಿ ದರ ಭಾರೀ ಏರಿಕೆ ಕಂಡಿದೆ.ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಹಿತದೃಷ್ಟಿಯಿಂದ ಗೋವಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈರುಳ್ಳಿ ನಾಶಿಕ್ ನಿಂದ ಗೋವಾ ಪ್ರವೇಶಿಸುವಂತೆಯೇ ನ್ಯಾಯಬೆಲೆ ಅಂಗಡಿಗಳು ಈರುಳ್ಳಿಯನ್ನು ಪಡೆದುಕೊಳ್ಳಬೇಕು. ತದನಂತರ ಗ್ರಾಹಕರಿಗೆ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರಿಗೆ ವಿಷಯ ತಿಳಿಸಲಾಗುವುದು ಎಂದು ರಾಜ್ಯ ನಾಗರೀಕ ಪೂರೈಕೆ ಇಲಾಖೆಯ ನಿರ್ದೇಶಕ ಸಿದ್ಧಿವಿನಾಯಕ ನಾಯ್ಕ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.