ಅಬುಧಾಬಿ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಸೋತರೆ ಟೂರ್ನಿಯಿಂದಲೇ ನಿರ್ಗಮಿಸಬೇಕಾದ ಸ್ಥಿತಿ ಇತ್ತಂಡಗಳಿಗೂ ಬಂದೊದಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ರಸ್ತುತ ಆಡಿರುವ ತಲಾ 9 ಪಂದ್ಯಗಳಲ್ಲಿ 3ರಲ್ಲಷ್ಟೇ ಗೆದ್ದು ಇತ್ತಂಡಗಳೂ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿವೆ. ಆದ್ದರಿಂದ ಇವತ್ತಿನ ಪಂದ್ಯದಲ್ಲಿ ಗೆದ್ದರಷ್ಟೇ ಪ್ಲೇ ಆಫ್ ಹಂತ ತಲುಪಲು ಸಾಧ್ಯತೆ ಇದೆ.
13 ನೇ ಐಪಿಎಲ್ ಆವೃತ್ತಿಯ 37 ನೇ ಪಂದ್ಯ ನಡೆಯುಲಿದ್ದು ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಸಾಯಂಕಾಲ ಘಂ: 7:30 ಕ್ಕೆ ಪಂದ್ಯ ಶುರುವಾಗಲಿದ್ದು ಇತ್ತಂಡಗಳೂ ಮಾಸ್ಟರ್ ಪ್ಲಾನ್ ಮಾಡುವಲ್ಲಿ ನಿರತವಾಗಿದೆ.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳು ಈ ಬಾರಿಯ ಪ್ರತೀ ಪಂದ್ಯದಲ್ಲೂ ಎಡವಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಆದರೆ ಇವತ್ತಿನ ಪಂದ್ಯದಲ್ಲಿ ಗತಿಸಿ ಹೋದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.ಪ್ಲೇ ಆಫ್ ಹಂತ ತಲುಪಬೇಕಾದರೆ ಇಂದಿನ ಗೆಲುವು ಇತ್ತಂಡಗಳಿಗೂ ಅನಿವಾರ್ಯ. ಉಭಯ ತಂಡಗಳೂ ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿರುವುದರಿಂದ ಇಂದಿನ ಪಂದ್ಯ ಹೈ ವೋಲ್ಟೇಜ್ ನಿಂದ ಕೂಡಿರಲಿದೆ .