ಬೆಂಗಳೂರು: ಇತ್ತೀಚೆಗೆ ಬಿಜೆಪಿಯಲ್ಲಿ ಆದಂತ ಕೆಲ ಬದಲಾವಣೆಯಿಂದ ಸಿಎಂ ಆಗಿ ಯಡಿಯೂರಪ್ಪ ಅವರು ಉಳಿಯುವುದೇ ಕಷ್ಟ ಎನ್ನುತ್ತಿದ್ದರು. ಅದಕ್ಕೆ ಪೂರಕವಾಗಿ ಅವರ ಪಕ್ಷದವರೇ ಆದ ಬಸನಗೌಡ ಯತ್ನಾಳ್ ಪದೇ ಪದೇ ಸಿಎಂ ಖುರ್ಚಿ ಬಗ್ಗೆ ಮಾತನಾಡುತ್ತಿದ್ದರು. ಪ್ರಧಾನಿ ಮೋದಿಯವರಿಗೆ ಅವರು ಸಿಎಂ ಆಗಿರುವುದು ಇಷ್ಟ ಇಲ್ಲ ಎಂಬ ಹೇಳಿಕೆ ನೀಡಿದ್ದರು. ರಾಜಕೀಯ ವಲಯದಲ್ಲೂ ಈ ವಿಚಾರ ಭಾರಿ ಚರ್ಚೆಯಾಗಿದ್ದು, ಉಪಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎಂದೇ ಇತ್ತು. ಆದರೆ ಪಿಎಂ ಮೋದಿ ಮಾಡಿರುವ ಒಂದು ಟ್ವೀಟ್ ಆ ಎಲ್ಲಾ ಯೋಚನೆಗಳನ್ನ ತಲೆ ಕೆಳಗೆ ಮಾಡಿದೆ.
ರಾಜ್ಯದ ಎರಡು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ರಾಜ್ಯದ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಮಾತ್ರ ಉಲ್ಲೇಖಿಸಿ ಶುಭಕೋರಿದ್ದಾರೆ. ಅತ್ತ ಬಿಹಾರದಲ್ಲೂ ಬಿಜೆಪಿಗೆ ಗೆಲುವಾಗಿದ್ದು, ಅಲ್ಲಿಯೂ ಜೆ ಪಿ ನಡ್ಡಾ ಅವರ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆ.
ಈ ಟ್ವೀಟ್ ಇದೀಗ ಚರ್ಚೆಯ ವಿಷಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಪಕ್ಷದ ಎಲ್ಲರ ಸಹಕಾರ ಮುಖ್ಯವಾಗಿರುತ್ತದೆ. ಪಕ್ಷದ ಸಂಘಟನೆ ಮಾಡುವುದರಲ್ಲಿ ರಾಜ್ಯಾಧ್ಯಕ್ಷರ ಪಾತ್ರವೂ ಇರಲಿದೆ. ಪ್ರಧಾನಿಗಳು ಕೇವಲ ಸಿಎಂ ಒಬ್ಬರಿಗೆ ಮಾತ್ರ ಶುಭಕೋರಿರುವುದು ಏಕೆ ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ.
The @BJP4Karnataka’s victories in Rajarajeshwarinagar and Sira are extremely special. It reaffirms the people’s unwavering faith in the reform agenda of the Centre and State Government under @BSYBJP Ji. I thank the people for their support and laud the efforts of our Karyakartas.
— Narendra Modi (@narendramodi) November 10, 2020
ಈ ಬೆನ್ನಲ್ಲೆ ಪ್ರಧಾನಿಯವರು ಕೇವಲ ಸಿಎಂ ಒಬ್ಬರನ್ನೇ ಆಯ್ಕೆ ಮಾಡಿ ಶುಭಕೋರಿರುವುದು ಇನ್ನು ಎರಡು ವರ್ಷ ಸಿಎಂ ಸ್ಥಾನದಲ್ಲೇ ಬಿ ಎಸ್ ಯಡಿಯೂರಪ್ಪ ಮುಂದುವರೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.