ಮೈಸೂರು : ವರ್ಗಾವಣೆ ವಿಚಾರಕ್ಕೆ ಸುದ್ದಿಯಾಗಿದ್ದ ಜಿಲ್ಲೆಯ ಡಿಸಿ ರೋಹಿಣಿ ಸಿಂಧೂರಿ ಇದೀಗ ಮತ್ತೆ ಪಾಲಿಕೆ ಮೇಯರ್ ರಿಂದ ಸುದ್ದಿಗೆ ಬಂದಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ವಿರುದ್ದ ಗರಂ ಆಗಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಶಿಷ್ಟಚಾರ ಪಾಲನೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ದಸರಾ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಡಿಸಿ ವಿರುದ್ದ ಮೈಸೂರು ಪಾಲಿಕೆ ಮೇಯರ್ ತಸ್ನಿಂ ಕೋಪಗೊಂಡಿದ್ದಾರೆ. ದಸರಾ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಸ್ವಾಗತ ಮಾಡುವಾಗ ಮೈಸೂರಿನ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು. ಆದರೆ, ಪೋಲೀಸರಿಗೆ ಮೇಯರ್ ಅವರನ್ನು ಒಳಗೆ ಬಿಡದಂತೆ ಹೇಳುತ್ತಾರೆ, ಇದಲ್ಲದೆ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಆದರೆ, ವೇದಿಕೆಯಲ್ಲಿ ಕೊನೆಯಲ್ಲಿ ನಮಗೆ ಆಸನ ನೀಡುತ್ತೀರಿ. ಶಿಷ್ಟಚಾರದ ಪ್ರಕಾರ ಮೈಸೂರಿನ ಮೇಯರ್ ಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಅದ್ಯಾವುದನ್ನ ನೀವು ಮಾಡಿಲ್ಲ.
ಇಷ್ಟೇ ಅಲ್ಲದೆ ದಸರಾ ವೇದಿಕೆಯಲ್ಲಿ ಸ್ವಾಗತ ಭಾಷಣ ಮಾಡಿದ ನೀವು ಉಪ ಮಹಾಪೌರರ ಹಾಗು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಿಗೆ ಸ್ವಾಗತವನ್ನೆ ಕೋರುವುದಿಲ್ಲ, ಇದೆಲ್ಲವನ್ನು ಯಾರ ಮನವೊಲಿಸಲು ಮಾಡುತ್ತಿದ್ದೀರಿ.? ನೀವು ಯಾಕೆ ಶಿಷ್ಟಚಾರ ಪಾಲನೆ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮೇಯರ್ ತಸ್ನಿಂ ಅವರು ಪ್ರಶ್ನೆ ಹಾಕಿದ್ದಾರೆ.