ಮೈಸೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಇರುವಾಗಲೇ ಸರ್ಕಾರ ಪಟಾಕಿಯನ್ನು ನಿಷೇಧ ಮಾಡಿದೆ. ಈ ಆದೇಶ ನೋಡಿ ಮಾರಾಟಗಾರರು ಕಂಗಲಾಗಿದ್ದರು. ಆನಂತರ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಜೆ ಕೆ ಮೈದಾನದಲ್ಲಿನ ಪಟಾಕಿ ಮಳಿಗೆಗಳಿಗೆ ಡಿಸಿಪಿ ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ಜೆಕೆ ಮೈದಾನದ ಎಲ್ಲಾ ಪಟಾಕಿ ಮಳಿಗೆಗಳಿಗೂ ಭೇಟಿ ನೀಡಿ ಬಾಕ್ಸ್ ಒಳಗಿರುವ ಪಟಾಕಿಗಳನ್ನು ಪರಿಶೀಲಿಸಿದ ಪ್ರಕಾಶ್ ಗೌಡ, ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡುವಂತೆ ಸೂಚನೆ ನೀಡಿದರು.
ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಪಟಾಕಿ ಮಾರಾಟಗಾರರು ಕಣ್ಣೀರು ಹಾಕಿದ್ದಾರೆ. ಇದೊಂದು ವರ್ಷ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿ ಎಂದು ಡಿಸಿಪಿ ಪ್ರಕಾಶ್ ಗೌಡರ ಬಳಿ ಕೈ ಮುಗಿದು ಬೇಡಿಕೊಂಡಿದ್ದಾರೆ.