ದೆಹಲಿ: ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ರಿಯಲಯನ್ಸ್ ಇಂಡಸ್ಟ್ರಿಸ್ ನ ಮಾಲೀಕ ಮುಖೇಶ್ ಅಂಬಾನಿಗೆ ಷೇರುಪೇಟೆ ಬಿಗ್ ಶಾಕ್ ಕೊಟ್ಟಿದೆ.
ಇತ್ತೀಚಿಗೆ ಕಂಪನಿಯ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಕುಸಿತ ಕಂಡು ಬಂದ ಬಳಿಕ ಈಗ ಷೇರು ಮಾರುಕಟ್ಟೆಯಲ್ಲಿ ಆಗಿರುವ ನಷ್ಟದಿಂದ ರಿಲಯನ್ಸ್ ತತ್ತರಿಸುವಂತಾಗಿದೆ. ಷೇರು ಮಾರುಕಟ್ಟೆಯಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಷೇರುಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಸುಮಾರು 37 ಸಾವಿರ ಕೋಟಿ ರೂ. ನಷ್ಟ ಅನುಭವಿಸುವಂತಾಗಿದೆ.
ನಿನ್ನೆ ರಿಲಯನ್ಸ್ ಷೇರುಗಳು 9% ಕುಸಿತ ಕಂಡಿದ್ದು, ಇಂದೂ ಕೂಡ ಮುಂದುವರೆದಿದೆ. ಅಂದಹಾಗೆ ಷೇರುಗಳ ಕುಸಿತಕ್ಕೆ ಪ್ರಮುಖ ಕಾರಣ ತ್ರೈಮಾಸಿಕ ನಿವ್ವಳ ಲಾಭದಲ್ಲಿ ನಷ್ಟವಾಗಿರುವುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಇತ್ತ ಷೇರುಪೇಟೆ ಕುಸಿಯುತ್ತಿದ್ದರೆ ಮತ್ತೊಂದೆಡೆ ಇವರ ವ್ಯವಹಾರಗಳು ಕೂಡ ನಷ್ಟ ಅನುಭವಿಸುವಂತಾಗಿದೆ. ತೈಲ ಉತ್ಪಾದನೆಯಿಂದ ಹಿಡಿದು ರಿಟೇಲ್ ವ್ಯವಹಾರದಲ್ಲಿ ಕೂಡ ಕುಸಿತ ಕಂಡಿದೆ. ಕಳೆದ ತ್ರೈಮಾಸಿಕದಲ್ಲಿ ರಿಲಯನ್ಸ್ನ ಆದಾಯದಲ್ಲಿ 1.3 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
ಇನ್ನು ಕೇವಲ ವ್ಯವಹಾರದಲ್ಲಿ ಇಳಿಮುಖವಾಗುತ್ತಿರುವುದಲ್ಲ, ಪೋರ್ಬ್ಸ್ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಕೂಡ ಅಂಬಾನಿ ಕೆಳಗಿಳಿಯುತ್ತಿದ್ದಾರೆ. ಪೋರ್ಬ್ಸ್ನ ರಿಯಲ್ ಟೈಂ ಬಿಲಿಯನೇರ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದ ಅಂಬಾನಿ ಈಗ 9 ನೇ ಸ್ಥಾನಕ್ಕೆ ಇಳಿದಿದ್ದಾರೆ.
ಇನ್ನೊಂದು ತ್ರೈಮಾಸಿಕ ವರದಿಯಲ್ಲಿ ನಷ್ಟ ಉಂಟಾದರೆ ಟಾಪ್ 10 ಪಟ್ಟಿಯಿಂದ ಕೂಡ ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ.