ಬಿಹಾರ: ಬಿಹಾರದಲ್ಲಿ ಇಂದು ಮೂರನೇ ಹಂತದ ಚುನಾವಣಾ ಮತದಾನ ನಡೆಯುತ್ತಿದೆ. 78 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಎಲ್ಲಾ ಮತದಾರರು ಪಾಲ್ಗೊಂಡು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು ಅಂತಿಮವಾಗಿ 16 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ.1204 ಅಭ್ಯರ್ಥಿಗಳು ಕಣದಲ್ಲಿದ್ದು ಕ್ಷೇತ್ರದಲ್ಲಿ ಸುಮಾರು 2.35 ಕೋಟಿ ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ. 1204 ಅಭ್ಯರ್ಥಿಗಳ ಪೈಕಿ 110 ಮಹಿಳಾ ಅಭ್ಯರ್ಥಿಗಳು ಮತ್ತು1094 ಪುರುಷ ಅಭ್ಯರ್ಥಿ ಗಳು ಕಣದಲ್ಲಿದ್ದು ತಮ್ಮ ರಾಜಕೀಯ ಭವಿಷ್ಯವನ್ನು ಓರೆಗೆ ಹಚ್ಚಿದ್ದಾರೆ.
ಬಿಹಾರದ ಮೂರನೇ ಮತ್ತು ಅಂತಿಮ ಹಂತದ ಮತದಾನದ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ಸೋಂಕು ಹರಡುವಿಕೆಯ ಆತಂಕದ ನಡುವೆಯೂ , ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಮತದಾನ ಮಾಡಬೇಕು, ಕೋವಿಡ್ 19 ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ಮತದಾನದಲ್ಲಿ ಪಾಲ್ಗೊಳ್ಳಿ. ಮತದಾನ ಮಾಡುವ ವೇಳೆ ಸ್ಯಾನಿಟೈಸರ್ , ಮುಖಗವಸು ಮತ್ತು ಕೈಗಳಿಗೆ ಗ್ಲೌಸ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
78 ವಿಧಾನಸಭಾ ಕ್ಷೇತ್ರದಲ್ಲಿ ಆರ್ ಜೆಡಿ 46 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಲೋಕಜನಶಕ್ತಿ ಪಕ್ಷ 42, ಜೆಡಿಯು 37, ಬಿಜೆಪಿ 35, ಎನ್ ಸಿಪಿ 31, ಕಾಂಗ್ರೆಸ್ 25 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಇನ್ನು ನ.10 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಬಿಹಾರದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂದು ಅವತ್ತು ನಿರ್ಧಾರವಾಗಲಿದೆ.