ಮಂಗಳೂರು : ಕೊರೊನಾದಿಂದಾಗಿ ಮುಚ್ಚಿದ್ದ ಕಾಲೇಜುಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದೆ. ನವೆಂಬರ್ 17ರಿಂದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಆದ್ರೆ ಕೊರಿನಾ ವೈರಸ್ ಹರಡುವ ಭಯ ಈಗಲು ಪೋಷಕರಲ್ಲಿದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ಆಯ್ಕೆಗಳನ್ನು ನೀಡಿದೆ.
ನವೆಂಬರ್ 17ರಿಂದ ಸರ್ಕಾರ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯಲಿದ್ದು, ಆನ್ಲೈನ್, ಆಫ್ ಲೈನ್ ಕ್ಲಾಸ್ ಎಂಬ ಎರಡು ಆಯ್ಕೆಗಳನ್ನು ನೀಡಲಿದೆ.
ಈ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಈ ಕುರಿತು ಮಾಹಿತಿ ನೀಡಿದ್ದು, “ಸ್ಥಳೀಯ ಕೋವಿಡ್ ಪರಿಸ್ಥಿತಿ, ಸರ್ಕಾರದ ಮಾರ್ಗಸೂಚಿಗಳನ್ನು ಪರಿಶೀಲನೆ ಮಾಡಿದ ಬಳಿಕ ಕಾಲೇಜುಗಳನ್ನು ತೆರೆಯುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಹಾಜರಾತಿಯನ್ನು ಗಂಭೀರವಾಗಿ ಪರಿಗಣನೆ ಮಾಡುವುದಿಲ್ಲ. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎಂಬ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ” ಎಂದು ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದಾರೆ.
ಕಾಲೇಜುಗಳನ್ನು ಆರಂಭಿಸುವುದಾದದರೆ ಕೋವಿಡ್ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು. ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕು, ಸಾಮಾಜಿಕ ಅಂತರ ಕಾಪಾಡುವುದು ಹೇಗೆ? ಮುಂತಾದ ನಿಯಮ ರೂಪಿಸಬೇಕು. ತರಗತಿ ನಡೆಸುವ ಆಯ್ಕೆಯನ್ನು ಮಂಗಳೂರು ವಿವಿ ಕಾಲೇಜುಗಳಿಗೆ ಬಿಡುತ್ತಿದೆ. ವಿಶ್ವವಿದ್ಯಾಲಯದ ಶೇ 50ರಷ್ಟು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಪರವಾಗಿದ್ದಾರೆ.
ತರಗತಿಗಳನ್ನು ಮಾಡಿದ ಬಳಿಕ ಅದರ ವಿಡಿಯೋವನ್ನು ವಿಶ್ವವಿದ್ಯಾಲಯ ವೆಬ್ ಸೈಟ್ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು ಅದನ್ನು ವೀಕ್ಷಿಸಬಹುದಾಗಿದೆ.