ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಾಪತ್ತೆಯಾಗಿದ್ದ 76 ಮಕ್ಕಳನ್ನ ಪತ್ತೆ ಹಚ್ಚಿದ ಲೇಡಿ ಕಾನ್ಸ್ಟೇಬಲ್ ಸೀಮಾ ಧಾಕಾ ಅವರಿಗೆ ಸಬ್ ಇನ್ಸ್ಪೆಕ್ಟರ್ ಶ್ರೇಣಿಗೆ ಭಡ್ತಿ ನೀಡಲಾಗಿದೆ. ಕಾಣೆಯಾಗಿದ್ದ ಮಕ್ಕಳನ್ನು ಪತ್ತೆಹಚ್ಚುವ ಪೊಲೀಸರಿಗೆ ಗೌರವ ಧನ ಮತ್ತು ಭಡ್ತಿ ನೀಡುವುದಾಗಿ ಪೊಲೀಸ್ ಕಮೀಷನರ್ ಎಸ್.ಎನ್ ಶ್ರೀವಾಸ್ತವ್ ಅವರು ಘೋಶಿಸಿದ್ದರು.
ಈ ಕುರಿತು ಮಾಹಿತಿ ನೀಡಿದ ದೆಹಲಿ ಪೊಲೀಸ್ ವಕ್ತಾರ ಐಶ್ ಸಿಂಘಾಲ್ ,ದೆಹಲಿಯ ಪೊಲೀಸ್ ಕಾನ್ಸ್ಟೇಬಲ್ ಸೀಮಾ ದಾಕಾ ಅವರು ಪಂಜಾಬ್, ಉತ್ತರಪ್ರದೇಶ, ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಣೆಯಾಗಿದ್ದ 76 ಮಕ್ಕಳನ್ನು ಪತ್ತೆಹಚ್ಚಿದ್ದರು.ಇದರ ಪರಿಣಾಮ ಅವರಿಗೆ ಎಎಸ್ಐ ಆಗಿ ಬಡ್ತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಅಂಕಿ ಅಂಶಗಳ ಪ್ರಕಾರ 2019 ರಲ್ಲಿ 5,412 ಮಕ್ಕಳು ಕಾಣೆಯಾಗಿದ್ದರೆ, ಶೇ.61.64 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. 2020ರಲ್ಲಿ 3,507 ಮಕ್ಕಳು ನಾಪತ್ತೆಯಾಗಿದ್ದರೆ, ಶೇ. 74.96 ರಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಸೀಮಾ ಧಾಕಾ ಒಟ್ಟು 76 ನಾಪತ್ತೆಯಾಗಿದ್ದ ಮಕ್ಕಳನ್ನು ಪತ್ತೆಗಚ್ಚಿದ್ದು, ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ಭಡ್ತಿ ಪಡೆದ ಮೊದಲ ಪೊಲೀಸ್ ಎನಿಸಿಕೊಂಡಿದ್ದಾರೆ. ಕಳೆದ ಎರಡೂವರೆ ತಿಂಗಳಿನಲ್ಲಿ ಸೀಮಾ, 76 ಮಕ್ಕಳನ್ನು ಪತ್ತೆಹಚ್ಚಿದ್ದು, ಇದರಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕೆಳಗಿನವರಾಗಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೀಮಾ ಧಾಕಾ, ಮಕ್ಕಳನ್ನು ಮತ್ತೆ ಪೋಷಕರೆಡೆಗೆ ಸೇರಿಸಿರುವುದು ನನಗೆ ಅತೀವ ಸಂತೋಷ ತಂದು ಕೊಟ್ಟಿದೆ. ನನ್ನ ಕೆಲಸವನ್ನು ಗುರುತಿಸಿ ಗೌರವಿಸಿರುವುದು, ಇನ್ನು ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.