ಬೆಂಗಳೂರು : ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮೇಲೆ ಎಫ್ ಐ ಆರ್ ದಾಖಲಾಗಿದೆ. ಈ ಬಗ್ಗೆ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಡಿ ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ ಐ ಆರ್ ದಾಖಲಾಗಿರೋದಕ್ಕೆ ರಾಜಕೀಯ ಬೆರೆಸುವ ಅವಶ್ಯಕತೆ ಇಲ್ಲ. ಕೊರೊನಾ ಇರುವ ಕಾರಣ ಮೂರು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿರೋದ್ರಿಂದ ಕೇಸ್ ದಾಖಲಿಸಲಾಗಿದೆ. ಅಭ್ಯರ್ಥಿ ನಾಮಪತ್ರ ಸಂದರ್ಭದಲ್ಲಿ ಈ ನಿಯಮ ಉಲ್ಲಂಘನೆ ಆಗಿದ್ದರಿಂದ ಅಭ್ಯರ್ಥಿ ಮೇಲೆ ಕೇಸ್ ದಾಖಲಿಸಲಾಗಿದೆ. ಇಲ್ಲಿ ರಾಜಕೀಯ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಅವರು ಇಂದು ಬೆಳಗ್ಗೆ ಸದಾಶಿವನಗರದ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಹೆಣ್ಣುಮಗಳ ಮೇಲೆ ಪ್ರಕರಣ ದಾಖಲಿಸಿದ ನೀಚ ರಾಜಕಾರಣವನ್ನು ನನ್ನ ರಾಜಕೀಯ ಬದುಕಿನಲ್ಲಿ ಕಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ಹೊಲಸು ರಾಜಕೀಯವನ್ನು ಎಲ್ಲೂ ನೋಡಿಲ್ಲ. ಮುಗ್ಧ, ಅಮಾಯಕ, ನೊಂದ-ಬೆಂದ ಹೆಣ್ಣುಮಗಳ ಮೇಲೆ ದಬ್ಬಾಳಿಕೆ ತೋರಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ.
ನಾವು ನಾಮಪತ್ರ ಸಲ್ಲಿಸಲು ಬೆಳಗ್ಗೆ 11.30 ರಿಂದ 12.30 ನಡುವೆ ಕಾಲಾವಕಾಶ ಪಡೆದಿದ್ದೆವು. ನಮ್ಮ ಪಕ್ಷದ ಅಭ್ಯರ್ಥಿ ಜೊತೆಗೆ ನಾನು ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೇರೆ ಬೇರೆ ಮಾರ್ಗಗಳಿಂದ ಬಿಬಿಎಂಪಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದೆವು. ಆದರೆ, ನಿನ್ನೆ ಬಿಬಿಎಂಪಿ ಕಚೇರಿಯ ಆವರಣದಲ್ಲಿ 100 ಮೀಟರ್ ದೂರದಲ್ಲಿ ಹಾಕಿದ್ದ ಬ್ಯಾರಿಕೇಡ್ ಅನ್ನು ತಳ್ಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಕುಸುಮಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ದುರುದ್ದೇಶಪೂರ್ವಕವಾಗಿ ಕೈಗೊಂಡ ಕೃತ್ಯ ಎನ್ನುವುದರಲ್ಲಿ ಸಂಶಯವಿಲ್ಲ ಎಂದಿದ್ದರು.