ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಜನ ಊರಿಗೆ ತೆರಳಲು ಒಂದು ವಾರಗಳ ಮುನ್ನವೇ ಫ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ ದಿಪಾವಳಿ ಹಬ್ಬ ಭಾನುವಾರ ಮತ್ತು ಸೋಮವಾರ ಬಂದಿದ್ದು, ಜನರು ಶನಿವಾರವೇ ಸಿಲಿಕಾನ್ ಸಿಟಿ ತೊರೆಯಲು ತೀರ್ಮಾನಿಸಿದ್ದಾರೆ. ಹೀಗಾಗಿ ಕೆ ಎಸ್ ಆರ್ ಟಿ ಬಸ್ ಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಿಕೊಂಡಿದೆ.
ನ.13 ಮತ್ತು ನ.14 ರಂದು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 1,000 ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಲಿವೆ. ನ. 13 ರಂದು ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೂ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಲಿವೆ. ನ. 16 ರಂದು ಬೇರೆ ಊರುಗಳಿಂದ ಬೆಂಗಳೂರಿಗೆ ವಾಪಾಸ್ ಬರಲು ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಪ್ರಮುಖವಾಗಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, , ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ.
ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿಗೆ ನ.13 ಮತ್ತು 14ರಂದು ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಪಕ್ಕದ ರಾಜ್ಯಗಳ ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರ, ಕೊಟ್ಟಾಯಂಗೆ ವಿಶೇಷ ಬಸ್ಗಳು ಸಂಚರಿಸಲಿವೆ ಎಂದು ಡೆಕನ್ ಹೆರಾಲ್ಡ್ ವರದಿ ಮಾಡಿದೆ.
ಕೊರೊನಾ ವೈರಸ್ ಕಾಟದಿಂದ ಬಸ್ ಗಳ ಸಂಖ್ಯೆ ಅಷ್ಟೇನು ಇರಲಿಲ್ಲ. ಇರುವ ಕಡಿಮೆ ಬಸ್ ಗಳಲ್ಲಿ ಹೇಗಪ್ಪ ಊರಿಗೆ ಹೋಗೋದು ಅನ್ನೋ ಚಿಂತೆಯಲ್ಲಿದ್ದ ಮಂದಿಗೆ ಕೆಎಸ್ ಆರ್ ಟಿ ಸಿ ಸಿಹಿ ಸುದ್ದಿಯನ್ನೇ ನೀಡಿದೆ. ಜನರು ತಮ್ಮ ತಮ್ಮ ಊರುಗಳಿಗೆ ಹೋಗಲು ಕೆ ಎಸ್ ಆರ್ ಟಿ ಸಿ ಅನುಕೂಲ ಮಾಡಿಕೊಟ್ಟಿದೆ.