ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ಕೊರೊನಾ ಸೋಂಕು ಧೃಡ ಪಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಅವರು, ನನಗೆ ಕೋವಿಡ್ 19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರುತ್ತೇನೆ. ಯಾವುದೇ ಲಕ್ಷಣವಿಲ್ಲದಿರುವುದರಿಂದ ಯಾವುದೇ ರೀತಿ ಆತಂಕವಿಲ್ಲ ಎಂದು ಹೇಳಿದ್ದಾರೆ.
ಸಚಿವ ಸುರೇಶ್ ಕುಮಾರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ರಾಜಕೀಯ ನಾಯಕರು ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನನ್ನ ಆತ್ಮೀಯರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು ಶೀಘ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ, ಸಂಪೂರ್ಣವಾಗಿ ಚೇತರಿಸಿಕೊಂಡು ತಮ್ಮ ಕರ್ತವ್ಯಕ್ಕೆ ಮರಳಲಿ ಎಂದು ಹಾರೈಸಿದ್ದಾರೆ.
ಅಲ್ಲದೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಬಿಜೆಪಿ ನಾಯಕ ಮತ್ತು ರಾಜಕೀಯ ಗಣ್ಯರು, ಸುರೇಶ್ ಕುಮಾರ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.