ಬೆಂಗಳೂರು: ಕೊರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ಇಲ್ಲಿವರೆಗೂ ಅದ್ದೂರಿಯಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳೆಲ್ಲಾ ಬಂದ್ ಆಗಿವೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿವೆ. ದೇವರ ಜಾತ್ರಾ ಮಹೋತ್ಸವ, ಉತ್ಸವ ಹೀಗೆ ಎಲ್ಲಾ ಕಾರ್ಯಕ್ರಮಗಳಿಗೂ ಕೊರೊನಾ ತನ್ನ ಕರಿಛಾಯೆಯಿಂದ ಆವರಿಸಿಕೊಂಡಿದೆ. ಇದೀಗ ಅದರ ಪರಿಣಾಮ ಕಡಲೆಕಾಯಿ ಪರಿಷೆ ಮೇಲೂ ಉಂಟಾಗಿದ್ದು, ಈ ಬಾರಿಯ ಕಡಲೆಕಾಯಿ ಪರಿಷೆಗೆ ಬ್ರೇಕ್ ಬಿದ್ದಿದೆ.
ಪ್ರತಿವರ್ಷ ಡಿಸೆಂಬರ್ ಬಂತೆಂದರೆ ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆಯದ್ದೇ ಸಂಭ್ರಮ. ಬಸವನಗುಡಿಯಲ್ಲಿ ನಡೆಯುತ್ತಿದ್ದ ಈ ಪರಿಷೆಗೆ ಲಕ್ಷಾಂತರ ಮಂದಿ ಬರುತ್ತಾ ಇದ್ರು. ಸುತ್ತ ಮುತ್ತೆಲ್ಲಾ ಕಡಲೆಕಾಯಿಯ ಅಂಗಡಿಗಳನ್ನ ನೋಡುವುದೇ ಒಂದು ಸಂಭ್ರಮ. ಬೆಂಗಳೂರಿಗರು ಸಂಜೆ ಒಮ್ಮೆ ಪರಿಷೆಗೆ ವಿಸಿಟ್ ಕೊಟ್ಟು, ಕಡಲೆ ಕಾಯಿ ತಿನ್ನುತ್ತಾ ಬರುತ್ತಾ ಇದ್ರು. ದೊಡ್ಡಗಣಪತಿಗೆ ಬಸವಣ್ಣನಿಗೆ ಕಡಲೆಕಾಯಿಯಿಂದಲೇ ಅಭಿಷೇಕ ಮಾಡ್ತಾ ಇದ್ರು. ಆದ್ರೆ ಈ ಬಾರಿ ಈ ಸಂಭ್ರಮ ಮರೆಯಾಗುವಂತಿದೆ.
ದೊಡ್ಡಗಣಪತಿ ದೇವಾಲಯದಿಂದ ಆದೇಶ ಹೊರಬಿದ್ದಿದ್ದು, ಈ ಬಾರಿ ಕೊರೊನಾ ವೈರಸ್ ಕಾರಣದಿಂದಾಗಿ ಪರಿಷೆಯನ್ನು ಸರಳವಾಗಿ ಮಾಡಲು ತೀರ್ಮಾನಿಸಿದ್ದಾರೆ. ವ್ಯಾಪಾರ ವಹಿವಾಟಿಗೆ ಫುಲ್ ಸ್ಟಾಪ್ ಇಟ್ಟಿದ್ದು, ದೇವರ ದರ್ಶನಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಕಡೆಯ ಕಾರ್ತೀಕ ಸೋಮವಾರದದಂದು ಈ ಕಡಲೆಕಾಯಿ ಪರಿಷೆ ನಡೆಯಲಿದೆ.