ಅಮೆರಿಕ: ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಭಾರತದ 5,00,000 ಕ್ಕೂ ಹೆಚ್ಚು ಹಾಗೂ ಬೇರೆ ಬೇರೆ ದೇಶಗಳ ಒಟ್ಟು ಸುಮಾರು 11 ಮಿಲಿಯನ್ ದಾಖಲೆ ರಹಿತ ವಲಸಿಗರಿಗೆ ಅಮೆರಿಕನ್ ಪೌರತ್ವ ನೀಡುವುದಾಗಿ ಭರವಸೆ ನೀಡಿದ್ದಾರೆಂದು ವರದಿಯಾಗಿದೆ.
ವಾರ್ಷಿಕ ಕನಿಷ್ಠ 95,000 ಹೆಚ್ಚು ಜನರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಕೆಲಸದ ನಿಮಿತ್ತ ಬಂದು ಅಮೆರಿಕ ದೇಶದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವವರಿಗೆ ನೀಡಲಾಗುವ ವೀಸಾ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ಬೈಡನ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಜೋ ಬೈಡೆನ್ ಅವರು, ಈ ವಿಚಾರವನ್ನು ವ್ಯಾಪಕವಾಗಿ ಮಂಡನೆ ಮಾಡಿದ್ದರು. ವಲಸಿಗರು ಅಮೆರಿಕಕ್ಕೆ ಎಷ್ಟು ಮುಖ್ಯ, ಅವರಿಂದ ದೇಶಕ್ಕೆ ಎಂಥ ಬಲ ಬರುತ್ತದೆ ಎಂಬುದನ್ನು ಭಾರತೀಯ ಅಮೆರಿಕನ ಸಮುದಾಯದ ಉದಾಹರಣೆ ಮೂಲಕ ಅವರ ನೀತಿ ದಾಖಲೆಯಲ್ಲಿ ಬರೆಯಲಾಗಿತ್ತು. ಇದೀಗ ಈ ನೀತಿಯನ್ನು ಕಾರ್ಯಾನುಷ್ಠಾನಕ್ಕೆ ತರಲು ಯೋಜನೆ ಹಾಕಲಾಗುತ್ತಿದೆ.
ಇನ್ನು ಮೊದಲು ಉನ್ನತ ಕೌಶಲ್ಯದ, ವಿಶೇಷ ಪರಿಣತಿ ಅವಶ್ಯ ಇರುವ ಕೆಲಸಗಳಿಗೆ ತಾತ್ಕಾಲಿಕ ವೀಸಾ ನಿಡುವ ವ್ಯವಸ್ಥೆಯಲ್ಲಿ ಮೊದಲಿಗೆ ಸುಧಾರಣೆ ತರಲಾಗುವುದು. ನಂತರ ವೀಸಾ ಪ್ರಮಾಣ ಹೆಚ್ಚಿಸಲಾಗುವುದು. ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ಗಳ ಸಂಖ್ಯೆಗಿರುವ ಮಿತಿಯನ್ನು ತೆಗೆದುಹಾಕುವುದು ಇವೇ ಮುಂತಾದ ಕ್ರಮಗಳು ನೂತನ ವಲಸೆ ನೀತಿ ಜಾರಿಗೆ ಕೈಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಅಮೆರಿಕದಲ್ಲಿರುವ ತಮ್ಮ ಕುಟುಂಬ ಸದಸ್ಯರ ಜೊತೆ ಸೇರಲು ಸಾಧ್ಯವಿಲ್ಲದೆ ಹಲವು ವರ್ಷಗಳಿಂದ ಹತಾಶೆಯಲ್ಲಿರುವ ಭಾರತೀಯರಿಗೆ ಈ ನೀತಿ ಅನುಕೂಲವಾಗಲಿದೆ ಎನ್ನಲಾಗಿದೆ.