ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ, 7 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 131 ರನ್ ಗಳಿಸಿತ್ತು. ಈ ಗುರಿಯನ್ನು ರೈಸರ್ಸ್ ಪಡೆ ಕೇವಲ 4 ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತ್ತು. ಇದರೊಂದಿಗೆ ಆರ್ಸಿಬಿ ಸೋತು ಈ ವರ್ಷವೂ ಕಪ್ ನಮ್ದಲ್ಲ ಎನ್ನುವುದನ್ನು ತೋರಿಸಿದೆ.
ಕ್ರೀಡಾ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಶೇ. 100ರಷ್ಟು ಇದು ಹೊಣೆಗಾರಿಕೆಯ ಸಮಸ್ಯೆಯಾಗಿದೆ. ಪಂದ್ಯಾವಳಿಯಲ್ಲಿ ಟ್ರೋಫಿ ಇಲ್ಲದೆ 8 ವರ್ಷಗಳು ಕಳೆದಿವೆ. ಎಂಟು ವರ್ಷಗಳು ಎಂಬುದು ಬಹಳ ದೀರ್ಘ ಸಮಯ. ಬೇರೆ ಯಾವುದೇ ನಾಯಕನನ್ನು ಕೇಳಿ. ನಾಯಕನ ವಿಚಾರವನ್ನು ಮರೆತುಬಿಡಿ. ಎಂಟು ವರ್ಷಗಳ ಕಾಲ ಟ್ರೋಫಿ ಗೆಲ್ಲದೆ ಆಟ ಮುಂದುವರಿಸುತ್ತಿರುವ ಬೇರೊಬ್ಬ ಆಟಗಾರನ ಬಗ್ಗೆ ಹೇಳಿ. ಹಾಗಾಗಿ ಇದು ಹೊಣೆಗಾರಿಕೆಯ ವಿಚಾರ. ನಾಯಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.
”ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕರಾದ ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಅವರ ಸಾಲಿನಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಲು ಸಾಧ್ಯವಿಲ್ಲ. ಆರ್.ಸಿ.ಬಿ ನಾಯಕತ್ವ ವಹಿಸಿಕೊಂಡ 8 ವರ್ಷಗಳಲ್ಲಿ ಕೊಹ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಐಪಿಎಲ್ ಟ್ರೋಫಿ ಗೆಲ್ಲದ ಒಬ್ಬ ನಾಯಕ ಎಂಟು ವರ್ಷಗಳ ಕಾಲ ಒಂದೇ ಫ್ರಾಂಚೈಸಿಯಲ್ಲಿ ಮುಂದುವರಿಯಬಹುದೇ?” ಎಂದು ಗೌತಮ್ ಗಂಭೀರ್ ಪ್ರಶ್ನೆ ಮಾಡಿದ್ದಾರೆ.
‘ತಂಡ ಗೆದ್ದಾಗ ಅಥವಾ ಸೋತಾಗ ಅದಕ್ಕೆ ನಾಯಕನೇ ಹೊಣೆಯಾಗಿರಬೇಕಾಗುತ್ತದೆ. ಗೆದ್ದಾಗ ಕ್ರೆಡಿಟ್ ಪಡೆಯುವ ನೀವು, ಸೋತಾಗಲೂ ಟೀಕೆಗಳನ್ನು ಸ್ವೀಕರಿಸಬೇಕು. ಸತತ ನಾಲ್ಕು ಸೋಲುಗಳ ನಂತರ ಆರ್ಸಿಬಿ ಪ್ಲೇಆಫ್ ಗೆ ಅರ್ಹತೆ ಪಡೆದು ಎಲಿಮಿನೇಟರ್ ಪಂದ್ಯದಲ್ಲಿ ಸೋತಿದೆ. ಆರ್ಸಿಬಿ ಕೊಹ್ಲಿ ಮತ್ತು ಡಿವಿಲಿಯರ್ಸ್ ರನ್ನು ಹೆಚ್ಚು ಅವಲಂಬಿಸಿದೆ. ಆರ್ಸಿಬಿ ಪರ ಎಬಿ ಡಿವಿಲಿಯರ್ಸ್ ಕೆಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ್ದಾರೆ. ಇವರಿಗೆ ಇನ್ನುಳಿದ ಆಟಗಾರರೂ ಸಾಥ್ ನೀಡಬೇಕಾಗುತ್ತದೆ” ಎಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದು ಕೇವಲ ಒಂದು ವರ್ಷ ವಿಚಾರವಲ್ಲ. ನನಗೆ ಕೊಹ್ಲಿ ವಿರುದ್ಧ ಹೇಳುವಂತಹದ್ದೇನೂ ಇಲ್ಲ. ಆದರೆ, ಆತ ಕೈ ಎತ್ತಿ ‘ಹೌದು, ನಾನೇ ಹೊಣೆಹೊರುತ್ತೇನೆ’ ಎಂದು ಹೇಳಬೇಕಾಗಿದೆ’ ಎಂದು ಹೇಳಿದ್ದಾರೆ. ಆ ಮೂಲಕ ವಿರಾಟ್ ಆರ್ಸಿಬಿ ನಾಯಕತ್ವದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದ್ದಾರೆ.
‘ಆರ್.ಅಶ್ವಿನ್ ಅವರಿಗೆ ಏನಾಯಿತು ನೋಡಿ. ಎರಡು ವರ್ಷ ಕಾಲ (ಕಿಂಗ್ಸ್ ಇಲವೆನ್ ಪಂಜಾಬ್) ತಂಡ ಮುನ್ನಡೆಸಿ ಪ್ರಶಸ್ತಿ ಗೆದ್ದು ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ತೆಗೆದುಹಾಕಲಾಯಿತು. ಎಂಎಸ್ ಧೋನಿ ಬಗ್ಗೆ ಮಾತನಾಡುತ್ತೇವೆ, ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತೇವೆ. ಕೊಹ್ಲಿ ಬಗ್ಗೆಯೂ ಮಾತನಾಡುತ್ತೇವೆ. ಧೋನಿ ಮೂರು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ರೋಹಿತ್ ನಾಲ್ಕು ಸಲ ಪ್ರಶಸ್ತಿ ಗೆದ್ದಿದ್ದಾರೆ. ಆ ಕಾರಣಕ್ಕಾಗಿಯೇ ಅಷ್ಟು ದೀರ್ಘ ಕಾಲದಿಂದ ನಾಯಕರಾಗಿ ಮುಂದುವರಿಯುತ್ತಿದ್ದಾರೆ. ಒಂದುವೇಳೆ ರೋಹಿತ್ 8 ವರ್ಷಗಳಿಂದ ಪ್ರಶಸ್ತಿ ಗೆದ್ದುಕೊಡದಿದ್ದರೆ, ಅವರನ್ನೂ ತೆಗೆದುಹಾಕಲಾಗುತ್ತಿತ್ತು. ವಿಭಿನ್ನ ಆಟಗಾರರಿಗೆ ವಿಭಿನ್ನ ಮಾನದಂಡಗಳು ಇರಬಾರದು’ ಎಂದು ಒತ್ತಿ ಹೇಳಿದ್ದಾರೆ.