ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನಿನ್ನೆ ತಡರಾತ್ರಿಯವರೆಗೂ ಭಾರೀ ಮಳೆಯಾಗಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಾಯಂಕಾಲ ಸುಮಾರು 6 ಘಂಟೆಯಿಂದ ಶುರುವಾದ ವರುಣನ ಅಬ್ಬರ ತಡರಾತ್ರಿಯವರೆಗೂ ಮುಂದುವರೆದಿತ್ತು. ಪರಿಣಾಮ ಹೆಚ್ಚಿನ ರಸ್ತೆಗಳು ಜಲಾವೃತಗೊಂಡು ಹಲವು ಅವಾಂತರ ಸೃಷ್ಟಿಸಿದವು. ನಗರದ ದಕ್ಷಿಣ , ಪಶ್ಚಿಮ ಮತ್ತು ರಾಜರಾಜೇಶ್ವರಿ ನಗರದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ತಗ್ಗು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರು ಬೈಕುಗಳು ಕೆಲವು ಕಡೆ ಮುಳುಗಡೆಯಾಗಿವೆ.ನಗರದ ಕೆಲವು ಕಡೆ ಮರಗಳು ಧರೆಗುರುಳಿರುವುದೂ ವರದಿಯಾಗಿದೆ.
ರಾಜರಾಜೇಶ್ವರಿ ನಗರದಲ್ಲಿಅತೀ ಹೆಚ್ಚಿನ ಅಂದರೆ 78.5 ಮಿ.ಮಿ ಮಳೆಯಾಗಿದ್ದು, ಉಳಿದಂತೆ ಕೆಂಗೇರಿ ಮತ್ತು ಬೇಗೂರಿನಲ್ಲಿ ತಲಾ 68.5 ಮಿ.ಮೀ ಮಳೆಯಾಗಿದೆ.
ಒಟ್ಟಾರೆಯಾಗಿ ನಿನ್ನೆ ತಡರಾತ್ರಿ ಸುರಿದ ಮಳೆ ಹಲವು ಅವಾಂತರಗಳಿಗೂ ಸಾಕ್ಷಿಯಾಯಿತು.ಮೈಸೂರು ರಸ್ತೆಯ ಬಿಜಿಎಸ್ ಸೇತುವೆಯ ಮೇಲ್ಬಾಗದಲ್ಲಿ ಭಾರೀ ನೀರು ಶೇಖರಣೆಯಾಗಿ ವಾಹನ ಸವಾರರು ಪರದಾಡಬೇಕಾಯಿತು. ಓಕಳೀಪುರಂ, ಶಿವಾನಂದ ಸರ್ಕಲ್ ಇನ್ನು ಹಲವು ಅಂಡರ್ ಪಾಸ್ ಗಳಲ್ಲಿ ನೀರು ನಿಂತು ಅಲ್ಲೂ ಕೂಡಾ ವಾಹನ ಸವಾರರು ಪರದಾಡುವ ಸ್ಥಿತಿ ಕಂಡುಬಂತು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ , ಇಂದು ಕೂಡಾ ಮೋಡ ಕವಿದ ವಾತಾವರಣವಿರಲಿದ್ದು ಇಂದೂ ಕೂಡಾ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.