ಹುಬ್ಬಳ್ಳಿ: ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಅವರಿಗೆ ಸೇರಿದೆ ಎನ್ನಲಾಗಿರುವ ಇನ್ನೋವಾ ಕಾರು ಮತ್ತು ಬಲೆನೋ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರು ಅಸುನೀಗಿದ್ದಾರೆ.
ಗದಗ-ಹುಬ್ಬಳ್ಳಿ ರಸ್ತೆಯ ಬಂಡಿವಾಡ ಬಳಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಅಪಘಾತದಲ್ಲಿ
ಧಾರವಾಡ ಮೂಲದ ಸ್ಮಿತಾ ಕಟ್ಟಿ ಹಾಗೂ ಇನ್ನೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಸ್ಥಳೀಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಅಪಘಾತವಾದ ಇನ್ನೋವಾ ಕಾರಿನಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ ದಾಖಲೆಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರು ನಟಿ ಉಮಾಶ್ರೀ ಅವರದೆಂದು ಹೇಳಲಾಗುತ್ತಿದೆ. ಆದರೆ ಸರಿಯಾದ ಮಾಹಿತಿ ಇನ್ನೂ ಹೊರಬಂದಿಲ್ಲ.
ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಬಲೆನೋ ಕಾರಿನ ನಡುವೆ ಶುಕ್ರವಾರ ರಾತ್ರಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.