ಬಂಟ್ವಾಳ: ಕರ್ಣಾಟಕ ಬ್ಯಾಂಕ್ನ ಮಾಜಿ ಅಧ್ಯಕ್ಷ ಹಾಗೂ ಸಿಇಒ ಅನಂತಕೃಷ್ಣ (74) ಅವರು ಅ.11ರ ಭಾನುವಾರ ನಿಧನರಾಗಿದ್ದಾರೆ. ಅನಂತಕೃಷ್ಣ ಅವರು 1946ರಲ್ಲಿ ಜನಿಸಿದ್ದು, ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು.
1971ರಲ್ಲಿ ಕರ್ಣಾಟಕ ಬ್ಯಾಂಕ್ನ ಅಧಿಕಾರಿಯಾಗಿ ಸೇರಿಕೊಂಡ ಇವರು ಬ್ಯಾಂಕ್ನ ಪ್ರಗತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. 2000ದಲ್ಲಿ ಇವರು ಬ್ಯಾಂಕ್ನ ಅಧ್ಯಕ್ಷ ಹಾಗೂ ಸಿಇಒ ಆಗಿ ನೇಮಕಗೊಂಡಿದ್ದು, 2004ರವರಗೆ ಸೇವೆ ಸಲ್ಲಿಸಿದ್ದಾರೆ. ಬಳಿಕ ಇವರು ಬ್ಯಾಂಕ್ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ 2016ರಲ್ಲಿ ನಿವೃತ್ತರಾದರು. ಇವರು, ಎಸ್.ವಿ.ಎಸ್ ಹೈಸ್ಕೂಲು ಬಂಟ್ವಾಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತು ಮೈಸೂರು ವಿವಿಯಿಂದ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದರು.
ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 1971ರಲ್ಲಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ಗೆ ಸೇರುವ ಮುನ್ನ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್)ನ ಜೂನಿಯರ್ ಪ್ರೋಗ್ರಾಮರ್ ಆಗಿ ಸೇರಿದ್ದರು. ಇವರ ಸಮರ್ಥ ನಾಯಕತ್ವದಲ್ಲಿ ಕರ್ಣಾಟಕ ಬ್ಯಾಂಕ್ ತ್ವರಿತ ಪ್ರಗತಿ ಸಾಧಿಸಿದ್ದು, ಉತ್ತಮ ಬೆಳವಣಿಗೆಗೆ ಸಾಕ್ಷಿಯಾಯಿತು. ಅನಂತಕೃಷ್ಣ ಅವರು ಭಾರತೀಯ ಬ್ಯಾಂಕ್ಗಳ ಸಂಘದ ಗೌರವ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅನಂತಕೃಷ್ಣ ಅವರಿಗೆ, ವರ್ಷದ ಪಿಆರ್ ಪರ್ಸನ್-2002, ಸೊಸೈಟಿ ಆಫ್ ಇಂಡಿಯಾ (ಪಿಆರ್ಎಸ್ಐ), ಮಂಗಳೂರು-ಮಣಿಪಾಲ ಚಾಪ್ಟರ್, ಕೆಕೆ ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ, ಮಂಗಳೂರು ನಿರ್ವಹಣಾ ಸಂಘದಿಂದ ಅತ್ಯುತ್ತಮ ವ್ಯವಸ್ಥಾಪಕ-2004, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ರೋಟರಿ ಕ್ಲಬ್ ಉಡುಪಿ-ಮಣಿಪಾಲ ಹಾಗೂ ಸಿಂಡಿಕೇಟ್ ಬ್ಯಾಂಕ್ ಜಂಟಿಯಾಗಿ ನೀಡಿದ ಹೊಸ ವರ್ಷದ ಪ್ರಶಸ್ತಿ-2008, ರೋಟರಿ 4ವೇ ಟೆಸ್ಟ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.