ಮೈಸೂರು: ಇವಿಎಂ ಯಂತ್ರಗಳ ಬಗ್ಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿರುವ ಅವರು, ಎಲೆಕ್ಟ್ರಾನಿಕ್ ಮತ ಯಂತ್ರಗಳೆಲ್ಲ ಈಗ ಮೋದಿ ಮತ ಯಂತ್ರಗಳಾಗಿ ಪರಿವರ್ತನೆಯಾಗಿವೆ. ಇವು ಇವಿಎಂ ಅಲ್ಲ, ಎಂವಿಎಂ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕಿಡಿಕಾರಿದ್ದಾರೆ.
ಶಿರಾ ಹಾಗೂ ಆರ್ ಆರ್ ನಗರದಲ್ಲಿ ಬಳಸಲಾದ ಇವಿಎಂಗಳನ್ನು ಯಾವ ರಾಜ್ಯದಿಂದ ತರಿಸಲಾಗಿತ್ತು ಎಂದು ಪ್ರಶ್ನಿಸಿದ ಅವರು, ಇವಿಎಂ ಅನ್ನು ಬಿಜೆಪಿ ಅಧಿಕಾರ ನಡೆಸುವ ರಾಜ್ಯಗಳಿಂದ ತರಿಸಲಾಗಿತ್ತು. ಅಮೇರಿಕಾದಂತಹ ರಾಷ್ಟ್ರವೇ ಬ್ಯಾಲಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಸುತ್ತದೆ. ನಾವು ಇವಿಎಂ ವಿರುದ್ಧವಾಗಿದ್ದೇವೆ. ಅದನ್ನು ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ಇವಿಎಂ ವಿರುದ್ಧ ದೊಡ್ಡ ಜನಾಂದೋಲನವನ್ನೇ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಮಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲ. ಚುನಾವಣೆಗಳನ್ನು ನಡೆಸುವುದಾದರೆ ಬ್ಯಾಲಟ್ ಪೇಪರ್ ಗಳನ್ನು ಬಳಸಿ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗವನ್ನು ಒತ್ತಾಯಿಸಿದ್ದಾರೆ.