ಚಾಮರಾಜನಗರ: ಬಾಲ ಕಳೆದುಕೊಂಡು ನರಳಾಡುತ್ತಿದ್ದ ಸಲಗವೊಂದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ.
ಮೊನ್ನೆ ಕಾದಾಟದಲ್ಲಿ ಬಾಲ ಕಳೆದುಕೊಂಡ ಒಂಟಿ ಸಲಗದ ಮೇಲೆ ಅರಣ್ಯ ಇಲಾಖೆ ತೀವ್ರ ನಿಗಾ ಇಟ್ಟಿದ್ದರು. ಚಿಕಿತ್ಸೆ ಬಳಿಕ ಕಾವೇರಿ ವನ್ಯಜೀವಿಧಾಮ ಸಂಗಮ ವಲಯಕ್ಕೆ ಆನೆಯನ್ನು ಬಿಡಲಾಗಿದೆ.
ಕಾಡಾನೆಗಳ ಕಾದಾಟದಲ್ಲಿ ಬಾಲ ಕಳೆದುಕೊಂಡು ಗಾಯಗೊಂಡಿದ್ದ ಒಂಟಿ ಸಲಗವೊಂದು ಗಾಯದ ನೋವು ತಾಳಲಾರದೇ ಹಾಗೂ ನೋಣದಿಂದ ರಕ್ಷಿಸಿಕೊಳ್ಳಲು ಬಹಳ ಸಮಯ ನೀರಿನಲ್ಲಿ ನಿಂತಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ಮಿಶ್ರ ಅವರ ಸೂಚನೆಯ ಮೇರೆಗೆ ಒಂಟಿ ಸಲಗಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮತ್ತಿಗೂಡ ಅರಣ್ಯದಿಂದ ಅಭಿಮನ್ಯು ಹಾಗೂ ಕೃಷ್ಣ ಎಂಬ ಎರಡು ಕುಮ್ಕಿ ಆನೆ ಹಾಗೂ ಬನ್ನೇರುಘಟ್ಟದಿಂದ ವೈದ್ಯ ಡಾ.ಉಮಾಶಂಕರ್ ಅವರನ್ನು ಕರೆಸಲಾಗಿತ್ತು. ಎರಡು ದಿನಗಳ ಕಾಲ ಒಂಟಿ ಸಲಗದ ಮೇಲೆ ನಿಗಾವಹಿಸಿ, ಗಾಯ ಮಾಸದಿದ್ದ ಕಾರಣ ಸಾಕಾನೆಗಳ ಸಹಾಯ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ.
ಗೋಪಾಲಸ್ವಾಮಿ ಹಾಗೂ ಅಭಿಮನ್ಯು ಆನೆಗಳ ಸಹಾಯ ಪಡೆದು ಡಾ.ಉಮಾಶಂಕರ್ ಮತ್ತು ಡಾ.ಮಂಜುನಾಥ ಸಲಗಕ್ಕೆ ಚಿಕಿತ್ಸೆ ನೀಡಿದ್ದಾರೆ. ಅರಿವಳಿಕೆ ನೀಡಿ ನೋವು ನಿವಾರಕ ಚುಚ್ಚುಮದ್ದು ನೀಡಿದ್ದು, ಗಾಯ ಮಾಯುವವರೆಗೆ ನಿರಂತರ ನಿಗಾ ಇಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಕುರಿತು ಕಾವೇರಿ ವನ್ಯಜೀವಿಧಾಮದ ಡಿಎಫ್ ಒ ರಮೇಶ್ ಮಾತನಾಡಿ, ಸಲಗಕ್ಕೆ 25 ವರ್ಷ ವಯಸ್ಸಾಗಿದ್ದು ಲದ್ದಿ, ಗಂಜಲದಿಂದಾಗಿ ಗಾಯ ಗಂಭೀರವಾಗಿತ್ತು. ಬೆಲ್ಲ ಹಾಗೂ ಹುಲ್ಲಿನೊಂದಿಗೆ ಔಷಧ ನೀಡಲಾಗಿದೆ. ಇಂದು 50ಕ್ಕೂ ಹೆಚ್ಚು ಸಿಬ್ಬಂದಿ ಆನೆಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದರು.