ಬೆಂಗಳೂರು : ಆರ್ ಆರ್ ನಗರ ಉಪಚುನಾವಣೆಯ ಕಣ ಬಿಸಿಯಾಗಿದ್ದು, ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಮೂರು ಪಕ್ಷಗಳು ಇನ್ನೊಂದು ಪಕ್ಷಗಳ ಮೇಲೆ ವಾಗ್ದಾಳಿ ನಡೆಸುತ್ತಲೇ ಇವೆ. ಇಂದು ಪ್ರಚಾರದ ವೇಳೆ ಸಂಸದ ಡಿ ಕೆ ಸುರೇಶ್ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗ ಮುನಿರತ್ನ ಅವರ ರಕ್ತ ಬದಲಾಗಿದೆ, ಕೆಂಪು ಬಣ್ಣದ ಬದಲು ಕೇಸರಿ ರಕ್ತ ಆಗಿದೆ. ನಾವು ರಾಜಕೀಯವಾಗಿ ಮಾತ್ರ ಮಾತನಾಡುತ್ತೇವೆಯೇ ಹೊರತು ವೈಯಕ್ತಿಕ ನಿಂದನೆ ಮಾಡಲ್ಲ, ನಮಗೂ ಜವಾಬ್ದಾರಿ ಇದೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಕಾಂಗ್ರೆಸಿನವರು ಮುನಿರತ್ನ ತಮ್ಮ ತಾಯಿಯನ್ನು ಮಾರಾಟ ಮಾಡಿದ್ದಾರೆಂದು ಹೇಳಿದ್ದ ಮಾತಿಗೆ ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್, ನಿರ್ಮಾಪಕರಿಗೆ ಕಣ್ಣೀರು ಹಾಕೋದು, ಹಾಕಿಸುವುದು ಚೆನ್ನಾಗಿ ಗೊತ್ತಿರುತ್ತದೆ. ಯಾವ ಸಮಯದಲ್ಲಿ ಯಾವ್ಯಾವ ಸೀನ್ ಇರಬೇಕು, ಯಾವಾಗ ಕಟ್ ಮಾಡಬೇಕು, ಯಾವಾಗ ಜೋಡಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಮುನಿರತ್ನ ಅವರಿಗೆ ಅದರಲ್ಲಿ ಸಾಕಷ್ಟು ಅನುಭವ ಇದೆ. ಸುಮ್ಮನೆ ಪ್ರಚಾರಕ್ಕಾಗಿ ಡ್ರಾಮಾ ಶುರು ಮಾಡಿದ್ದಾರೆ. ಕೆಂಪಗಿದ್ದ ಅವರ ರಕ್ತ ಈಗ ಕೇಸರಿಯಾಗಿದೆ ಎಂದು ಟೀಕಿಸಿದ್ದಾರೆ.
ನನ್ನ ತಾಯಿ ಕಾಂಗ್ರೆಸ್, ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಅಂದಿದ್ದವರು ಮುನಿರತ್ನ. ಅದೆಲ್ಲ ಅವರಿಗೆ ಈಗ ಮರೆತು ಹೋಗಿರಬಹುದು. ಆದರೆ, ಆರ್ಆರ್ ನಗರ ಕ್ಷೇತ್ರದ ಜನರು ಅದನ್ನು ಮರೆತಿಲ್ಲ. ಕಟ್, ಪೇಸ್ಟ್ ಮಾಡೋದು ಅವರ ಅಭ್ಯಾಸ. ಹೀಗಾಗಿ, ಮರೆತು ಹೋಗಿರುತ್ತಾರೆ. ಅವರಿಗೆ ಯಾವಾಗ ಯಾರನ್ನು ಅಳಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅಂಥವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಡಿಕೆ ಸುರೇಶ್ ಎಚ್ಚರಿಸಿದ್ದಾರೆ.