ಬೆಂಗಳೂರು: ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಲಮಾಣಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಗ್ಸ್ ಪೆಡ್ಲರ್ ಗಳಿಗೆ ಸಾಥ್ ನೀಡುತ್ತಿದ್ದ ಲಮಾಣಿ ಡ್ರಗ್ಸ್ ಡೀಲಿಂಗ್ ನಲ್ಲಿ ಸಿಕ್ಕಿಬಿದ್ದಿದ್ದಾನೆ.
ದರ್ಶನ್ ಲಮಾಣಿ ಡ್ರಗ್ಸ್ ಡೀಲಿಂಗ್ ಬಗ್ಗೆ ತನಿಖೆ ನಡೆಸಿದ ವೇಳೆ ಆತ ಡಾರ್ಕ್ ವೆಬ್ ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ. ಡಾರ್ಕ್ ವೆಬ್ ಸೈಟ್ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದವರ ಜಾಡು ಹಿಡಿದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನವೆಂಬರ್ 4 ರಂದು ದಾಳಿ ನಡೆಸಿದ್ದರು. ಫಾರಿನ್ ಪೋಸ್ಟ್ ಆಫೀಸ್ಗೆ ವಿದೇಶದಿಂದ ಡ್ರಗ್ಸ್ ಪಾರ್ಸೆಲ್ ಬರುತಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಆರೋಪಿ ಸುಜಯ್ ಎಂಬಾತ ಗಾಂಜಾ ಸಮೇತ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದ.
ಸುಜಯ್ ವಿಚಾರಣೆ ನಡೆಸಿದ ನಂತರ ಆ ವೇಳೆ ಇನ್ನಿಬ್ಬರು ಆರೋಪಿಗಳ ಹೆಸರು ಹೊರಬಿದ್ದಿತ್ತು. ಹೇಮಂತ್ ಮತ್ತು ಸುನೀಶ್ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಹೇಮಂತ್ ಮತ್ತು ಸುನೀಶ್ ಗೋವಾದಲ್ಲಿ ಪತ್ತೆಯಾಗಿದ್ದರು. ಇವರ ಜೊತೆಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಯನ್ನೂ ಅರೆಸ್ಟ್ ಮಾಡಲಾಗಿದೆ.
ಅನೈತಿಕ ಚಟುವಟಿಕೆಗಳಿಗೆ ಬಳಸಲಾಗುವ ವೆಬ್ ಸೈಟ್ ಗಳನ್ನು ಡಾರ್ಕ್ ವೆಬ್ ಸೈಟ್ ಎನ್ನಲಾಗುತ್ತದೆ. ಕೆಲ ವಿಶೇಷ ಸಾಫ್ಟ್ ವೇರ್ ಗಳನ್ನು ಬಳಸಿ ಮಾತ್ರ ಈ ವೆಬ್ ಸೈಟ್ ಗೆ ಹೋಗಬಹುದಾಗಿದೆ. ಈ ಡಾರ್ಕ್ ವೆಬ್ ಸೈಟ್ ನ್ನು ಡ್ರಗ್ಸ್, ಶಸ್ತ್ರಾಸ್ತ್ರ, ಇತರೆ ಅನೈತಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ದರ್ಶನ್ ಲಮಾಣಿ ಕೂಡ ಇಂತ ವೆಬ್ ಸೈಟ್ ಮೂಲಕವೇ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.