ಮಂಗಳೂರು: ಇಷ್ಟು ದಿನ ಬೆಂಗಳೂರಿನಲ್ಲಿದ್ದ ಡ್ರಗ್ಸ್ ಘಾಟು ಮಂಗಳೂರಿಗೂ ಹಬ್ಬಿದೆ. ಮಂಗಳೂರಿನಲ್ಲಿ ಡ್ರಗ್ಸ್ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಡ್ಯಾನ್ಸರ್ ಕಿಶೋರ್ ಅಮನ್ (30) ಹಾಗೂ ಸುರತ್ಕಲ್ ಕಾನ ನಿವಾಸಿ ಅಕೀಲ್ ನೌಶೀಲ್ (28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಮುಂಬೈಯಿಂದ ಡ್ರಗ್ಸ್ ತಂದು ಇವರು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಡ್ಯಾನ್ಸರ್ ಕಿಶೋರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ಯಾನ್ಸರ್ ಸಹಿತ ಇಬ್ಬರು ಆರೋಪಿಗಳನ್ನು ನಗರದ ಕದ್ರಿ ಪದವು ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನು ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ. ಈ ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇವರಿಬ್ಬರ ಮೇಲೂ ಸೇವನೆ ಮತ್ತು ಮಾರಾಟ ಎರಡು ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದು, ಒಂದು ವರ್ಷದ ಹಿಂದೆ ಊರಿಗೆ ವಾಪಾಸ್ಸಾಗಿದ್ದ. ಕಿಶೋರ್ ಅಮನ್ ಶೆಟ್ಟಿ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೇ, ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಈ ಆರೋಪಿಗಳು ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತಿದ್ದರು ಎಂದರು.
ಇಂದು ಮುಂಜಾನೆ ಮಂಗಳೂರು ಸಿಸಿಬಿ ಪೊಲೀಸರು, ಎಕನಾಮಿಕ್ & ನಾರ್ಕೋಟಿಕ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮಾದಕ ವಸ್ತು ಎಂಡಿಎಂಎ ಪೌಡರ್ ಸೇರಿದಂತೆ ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಕಿಶೋರ್ ಬಹಳ ಹುಡುಗಿಯರಿಗೆ ಡ್ರಗ್ಸ್ ನೀಡಿ ಪಾರ್ಟಿ ಮಾಡುತ್ತಿದ್ದ ಎನ್ನಲಾಗಿದ್ದು, ಬೆಂಗಳೂರಿನ ಪ್ರಖ್ಯಾತ ಆಂಕರ್ ಕಂ ನಟಿ ಜೊತೆ ಕೂಡ ಪಾರ್ಟಿ ಮಾಡುತ್ತಿದ್ದ ಎಂದು ಹೇಳಲಾಗಿದೆ. ಹಾಗೆಯೇ ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಒಂದು ಡ್ರಗ್ ಪಾರ್ಟಿಯಲ್ಲಿ ಆ ನಟಿ ಕಂ ಆಂಕರ್ ಭಾಗವಹಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು ಸ್ಪೋಟಕ ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಗಳಿವೆ ಎನ್ನಲಾಗಿದೆ. ಅಲ್ಲದೇ ಯುವತಿಯರನ್ನು ಸೇರಿಸಿ ಅವರಿಗೆ ತಂಡ ಡ್ರಗ್ಸ್ ನೀಡುತ್ತಿತ್ತು ಎಂದು ಹೇಳಲಾಗುತ್ತಿದೆ.
News In Brief: Mangaluru: Dancer Kishore Shetty arrested by CCB police for possessing drugs