ಬೆಂಗಳೂರು : ಡಾಲಿ ಧನಂಜಯ್ ನಟನೆ ಹಾಗೂ ನಿರ್ಮಾಣದ ಸಿನಿಮಾ ಬಡವ ರಾಸ್ಕಲ್ ತನ್ನ ಕೊನೆಯ ಹಂತದ ಚಿತ್ರೀಕರಣವನ್ನ ಮುಗಿಸಿಕೊಂಡಿದೆ. ಆದ್ರೆ ಈ ಸಂದರ್ಭದಲ್ಲಿ ನಟ ಧನಂಜಯ್ ಈ ಸಿನಿಮಾಗಾಗಿ ದುಡಿದವರಿಗೆ ಸಹಾಯ ಮಾಡಿದ್ದಾರೆ. ಸಿನಿ ಕಾರ್ಮಿಕರಿಗೆ ಉಡುಗೊರೆ ನೀಡಿದ್ದಾರೆ. ಇದು ಸಿನಿ ಕಾರ್ಮಿಕರ ಮುಖದಲ್ಲಿ ಸಂತಸ ಮೂಡಿಸಿದೆ.
ಬಡವ ರಾಸ್ಕಲ್ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಜನ ಕಾರ್ಮಿಕರಿಗೆ ಕುಕ್ಕರ್, ಹಾಟ್ ವಾಟರ್ ಬಾಟಲ್ ಸೇರಿದಂತೆ ಮುಂತಾದ ಅಗತ್ಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೊದಲ ಬಾರಿಗೆ ಒಬ್ಬ ನಿರ್ಮಾಪಕ ಈ ರೀತಿ ಉಡುಗೊರೆ ಕೊಡುವ ಮೂಲಕ ತಮ್ಮ ಚಿತ್ರದ ಚಿತ್ರೀಕರಣವನ್ನು ಸಂತಸದಿಂದ ಪೂರ್ಣಗೊಳಿಸಿದ್ದಾರೆ. ಸ್ಪೆಷಲ್ ಸ್ಟಾರ್ ಧನಂಜಯ್ ರ ಈ ವಿಶೇಷ ಗುಣವನ್ನು ಚಿತ್ರತಂಡ ಮುಕ್ತ ಕಂಠದಿಂದ ಕೊಂಡಾಡಿದೆ.
ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಸಾವಿತ್ರಮ್ಮ ಅಡವಿಸ್ವಾಮಿ ನಿರ್ಮಿಸಿರುವ ಬಡವ ರಾಸ್ಕಲ್ ಚಿತ್ರಕ್ಕೆ ಶಂಕರ್ ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಧ್ಯಮವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೇ ಬಡವ ರಾಸ್ಕಲ್ ಚಿತ್ರದ ಕಥಾಹಂದರ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಶಂಕರ್ ಗುರು ಅವರೇ ಬರೆದಿದ್ದಾರೆ. ಬಡವ ರಾಸ್ಕಲ್, ಡಾಲಿಗೆ ಚೊಚ್ಚಲ ನಿರ್ಮಾಣದ ಸಿನಿಮಾ ಆಗಿದ್ದರೆ, ಶಂಕರ್ ಗುರು ಅವರಿಗೆ ಮೊದಲ ನಿರ್ದೇಶನದ ಸಿನಿಮಾ.
#BADAVARASCAL ಸಿನಿಮಾ ಚಿತ್ರೀಕರಣದ ಕೊನೆಯ ದಿನ ಡಾಲಿ ಧನಂಜಯ,ಸಿನಿಮಾಗಾಗಿ ದುಡಿದ ನೂರಕ್ಕು ಹೆಚ್ಚು ಕಾರ್ಮಿಕರಿಗೆ Cooker,Tawa ಹಾಗು hot water bottle ಗಳನ್ನು ಉಡುಗೊರೆಯಾಗಿ ನೀಡಿದರು.ಇಂತ ಹೃದಯವಂತ ನಿರ್ಮಾಣ ಮಾಡಿದ ಹೃದಯವಂತಿಕೆಯ ಸಿನಿಮಾ ಯಶಸ್ವಿಯಾಗಲೆಂದು ಎಲ್ಲ ಕಾರ್ಮಿಕರು ಮನಃಪೂರ್ವಕವಾಗಿ ಹರಸಿದರು.
— DAALI DHANANJAYA FANS (@DhananjayFans) October 13, 2020
Follow @DhananjayFans pic.twitter.com/EHQpk24zo9
ವಿಶೇಷ ಅಂದರೆ ಡಾಲಿ ಮತ್ತು ಶಂಕರ್ ಗುರು ಅವರೇ ಬಡವ ರಾಸ್ಕಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಪಾಂಡವಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡವ ರಾಸ್ಕಲ್ ಚಿತ್ರೀಕರಣ ಮಾಡಲಾಗಿದೆ.