ಚಿಕ್ಕಮಗಳೂರು ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದವಾಗಿ ಪ್ರತಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ವಿಚಾರವಾಗಿ ಮಾತನಾಡಿರುವ ರಾಷ್ಟ್ರೀಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಸಿದ್ದರಾಮಯ್ಯನವರು ವ್ಯಕ್ತಿಗತ ದೂಷಣೆ ಮಾಡುವುದು ತಪ್ಪು , ಅವರೇ ತಮ್ಮ ತಪ್ಪನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.
ನಾವ್ಯಾರೂ ಶತ್ರುಗಳಲ್ಲ , ಕೇವಲ ರಾಜಕೀಯ ವಿರೋಧಿಗಳಷ್ಟೇ , ರಾಜಕೀಯ ಮೇಲಾಟ ವೈಯುಕ್ತಿಕವಾಗಿ ಬಳಕೆಯಾಗಬಾರದು. ಹಿರಿಯರಾಗಿ ,ಸಿಎಂ ಸ್ಥಾನದಲ್ಲಿದಂತವರಿಗೆ ಬುದ್ದಿಮಾತು ಹೇಳುವಷ್ಟು ದೊಡ್ಡವರು ನಾವಲ್ಲ. ಅವರು ಮಾಡಿದ ಪದಬಳಕೆ , ಪ್ರತಿಕ್ರಿಯಿಸಿದ ರೀತಿಯನ್ನು ಸಿದ್ದರಾಮಯ್ಯ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
“ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಬ್ಬ ಕಾಡುಮನುಷ್ಯ. ನಾಗರೀಕ ಜಗತ್ತಿನಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನ ಜನರ ಹಿತದೃಸ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಬಿಟ್ಟು ಬರಬೇಕು” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಟ್ಟೀಟ್ ಮಾಡಿದ್ದರು.
ಇನ್ನು ಇದೇ ಸಮಯದಲ್ಲಿ ಬಿಹಾರ ಚುನಾವಣಾ ಪ್ರಣಾಳಿಕೆ ಕುರಿತಾಗಿ ಮಾತನಾಡಿದ ಸಿ.ಟಿ ರವಿ ಯವರು ಕೊರೊನಾ ಲಸಿಕೆ ಹಂಚಿಕೆ ವಿಚಾರವನ್ನು ಸಮರ್ಥಿಸಿಕೊಂಡರು. ಜನರ ಹಿತದೃಷ್ಟಿಯಿಂದ ನಾವು ಈ ವಿಚಾರ ಮುನ್ನೆಲೆಗೆ ತಂದಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.