ದಾವಣಗೆರೆ: ಮೊಸಳೆ ಅಂದ್ರೆ ಯಾರಿಗೆ ಭಯ ಆಗಲ್ಲ ಹೇಳಿ. ದೂರದಲ್ಲೆಲ್ಲೋ ಇದೆ ಅಂತ ಕೇಳಿದ್ರೆನೆ ಮಾರು ದೂರ ಓಡಿ ಹೋಗ್ತೇವೆ. ಅಂತದ್ರಲ್ಲಿ ದಿನನಿತ್ಯ ಬಳಸುವ ಕೆರೆಯಲ್ಲೇ ಮೊಸಳೆ ಇದೆ ಅಂದಾಗ ಇನ್ನೆಷ್ಟು ಗಾಬರಿಯಾಗಲ್ಲ. ಅಂತದ್ದೇ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ತುಂಗಭದ್ರಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಕಾಣಿಸಿಕೊಂಡಿದೆ. ಇದನ್ನ ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಕೆಲವರು ಮೊಸಳೆ ಪ್ರತ್ಯಕ್ಷವಾಗಿರುವುದನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ನದಿ ಪಾತ್ರದಲ್ಲಿ ಪ್ರತ್ಯಕ್ಷವಾದ ಮೊಸಳೆ ಕಂಡು ಜನರು ಭಯಭೀತರಾಗಿದ್ದು, ನದಿಯ ಬಳಿ ಹೋಗಲು ಹೆದರುತ್ತಿದ್ದಾರೆ. ದಿನನಿತ್ಯ ನದಿಯ ಬಳಿ ಜನರು ಬಟ್ಟೆ ಹಾಗೂ ಜಾನುವಾರುಗಳನ್ನ ತೊಳೆಯಲು ಹೋಗುತ್ತಿದ್ದರು. ಇದೀಗ ಮೊಸಳೆ ಕಾಣಿಸಿಕೊಂಡಿದ್ದರ ಹಿನ್ನೆಲೆ ತುಂಗಭದ್ರ ನದಿ ಪಾತ್ರದಲ್ಲಿನ ನಿವಾಸಿಗಳು ಜಾಗೃತರಾಗಿರಲು ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ ಮನವಿ ಮಾಡಿದ್ದಾರೆ.