ದೆಹಲಿ : ಕೊರೋನಾ ವೈರಸ್ ಈ ಹೆಸರು ಕೇಳಿದರೇ ಸಾಕು ಎಲ್ಲರ ಕಿವಿ ನೆಟ್ಟಗಾಗುತ್ತದೆ. ಇಂತಹ ಮಾರಕ ವೈರಸ್ ನ ಉಗಮಸ್ಥಾನ ಚೀನಾ ದೇಶದ ವುಹಾನ್ ನಗರ. ಇದೀಗ ವುಹಾನ್ ನಗರದಿಂದ ಭಾರತಕ್ಕೆ ವಿಮಾನಯಾನ ಪುನಾರಂಭವಾಗಲಿದೆ.
ಕೋವಿಡ್ 19 ಮಹಾಮಾರಿ ವಿಶ್ವದಾದ್ಯಂತ ಮಾಡಿರುವ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ವಿಶ್ವದಾದ್ಯಂತ ಹಲವು ಜನರನ್ನ ಬಲಿ ತೆಗೆದುಕೊಂಡಿರುವ ಈ ವೈರಸ್ ಇನ್ನೂ ಕೆಲವರನ್ನ ಬಲಿ ತೆಗೆದುಕೊಳ್ಳುವ ತವಕದಲ್ಲಿದೆ. ಹೀಗಾಗಿ ಕೊರೋನಾ ವೈರಸ್ ತವರೂರಿಗೆ ವಿಶ್ವಸಂಸ್ಥೆ ಹಲವು ನಿರ್ಭಂಧ ವಿಧಿಸಿತ್ತು. ಸಂಪೂರ್ಣ ಬಂದ್ ಆಗಿದ್ದ ವುಹಾನ್ ನಗರ ಇದೀಗ ಸಹಜಸ್ಥಿತಿಯತ್ತ ಮರಳುತ್ತಿದೆ. ಮತ್ತು ಅಲ್ಲಿನ ನಿರ್ಭಂದಗಳಿಗೂ ವಿನಾಯಿತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ವುಹಾನಿಂದ ವಿಮಾನಯಾನ ಪುನಾರಂಭವಾಗಿದ್ದು , ಭಾರತಕ್ಕೂ ವುಹಾನ್ ನಿಂದ ವಿಮಾನ ಸಂಚಾರ ಮತ್ತೆ ಶುರುವಾಗಲಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಇಂದಿನಿಂದ ದೆಹಲಿ- ವುಹಾನ್ ವಿಮಾನ ತನ್ನ ಸಂಚಾರ ಆರಂಭಿಸಲಿದೆ ಎಂದು ಬೀಜಿಂಗ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ವುಹಾನ್ ನಿಂದ ದೆಹಲಿ ಗೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕಿದೆ. ತದನಂತರ ಅವರೆಲ್ಲರ ಕೊರೋನಾ ಟೆಸ್ಟ್ ಮಾಡಿಸಿದ ನಂತರವಷ್ಟೇ ಅವರುಗಳು ತೆರಳಬಹುದಾಗಿದೆ ಎಂದು ತಿಳಿಸಲಾಗಿದೆ.