ವಾಷಿಂಗ್ಟನ್ : ಭಾರತದಂತೆ ಅಮೆರಿಕದಲ್ಲಿಯೂ ಕೊರೊನಾ ಲಸಿಕೆ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಡೆಮಾಕ್ರಟಿನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಅಧ್ಯಕ್ಷರಾದರೆ ಅಮೆರಿಕನ್ನರಿಗೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.
ತಮ್ಮ ತವರು ರಾಜ್ಯ ಡೆಲವೇರ್ನಲ್ಲಿ ಕೊರೊನಾ ನಿಯಂತ್ರಣ ನೀತಿ ಬಗ್ಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಲಭಿಸಿದ ಕೂಡಲೇ ಉಚಿತ ವಿತರಣೆಗಾಗಿ ಬೃಹತ್ ಪ್ರಮಾಣದಲ್ಲಿ ಲಸಿಕೆ ಖರೀದಿಗೆ ಆದೇಶಿಸುವೆ. ವಿಮೆ ಇಲ್ಲದವರಿಗೂ ಉಚಿತವಾಗಿ ಲಸಿಕೆ ವಿತರಣೆ ಮಾಡಲು ಬೇಕಾಗುವಷ್ಟು ಲಸಿಕೆಯನ್ನು ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಕೊರೊನಾ ತಡೆಗಟ್ಟಲು ಟ್ರಂಪ್ ನೇತೃತ್ವದ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಅಮೆರಿಕದಲ್ಲಿ 2.23 ಲಕ್ಷ ಜನ ಸಾವನ್ನಪ್ಪುವಂತಾಯಿತು ಎಂದು ಆರೋಪಿಸಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ ಕೊರೊನಾ ಸೋಂಕು ಕೆಟ್ಟ ಪರಿಣಾಮ ಬೀರಿದೆ. ಎಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಕೊರೊನಾ ಹೆಚ್ಚುತ್ತಿದೆ. ಅಧ್ಯಕ್ಷ ಟ್ರಂಪ್ ಬಳಿ ಇದಕ್ಕೆ ಯಾವುದೇ ಸರಿಯಾದ ಉಪಾಯಗಳಿಲ್ಲ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಬಿಹಾರದ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ರೆ ಕೊರೊನಾ ಲಸಿಕೆ ಉಚಿತ ಎನ್ನುವುದನ್ನು ಬಿಜೆಪಿ ಯಾವಾಗ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತೋ, ಆಗಿನಿಂದ ಕೆಲವು ಕಡೆ ಚುನಾವಣೆಯ ಅಸ್ತ್ರವನ್ನಾಗಿ ಈ ಕೊರೊನಾ ವೈರಸ್ ಬಳಸಿಕೊಳ್ಳುತ್ತಿದ್ದಾರೆ. ಮನುಷ್ಯ ಇಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆದ್ರೆ ಪಕ್ಷಗಳಿಗೆ ಅದು ಚೆಲ್ಲಾಟವಾಗಿದೆ. ಕಂಡುಹಿಡಿಯದೇ ಇರುವ ಲಸಿಕೆಯನ್ನ ಅಸ್ತ್ರವನ್ನಾಗಿಸಿಕೊಂಡ ಯಾವ ಪಕ್ಷಗಳು ಜನರ ಮನಸ್ಸನ್ನ ಗೆಲ್ಲುತ್ತವೆ ಎಂಬುದನ್ನು ನೋಡಬೇಕಿದೆ.