ದೆಹಲಿ: ಕೊರೋನಾ ಮಾಹಿತಿ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು ಕಳೆದ 24 ಗಂಟೆಯಲ್ಲಿ 50,357 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ವರದಿ ನೀಡಿದೆ.
ಕಳೆದ 24 ಗಂಟೆಯಲ್ಲಿ 577 ಮಂದಿ ಸಾವನ್ನಪ್ಪಿದ್ದು , ಕೊರೋನಾದಿಂದ ಸತ್ತವರ ಸಂಖ್ಯೆ 1,25,562 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 5,16,632 ಸಕ್ರಿಯ ಕೊರೋನಾ ಪ್ರಕರಣಗಳಿದ್ದು , ನಿನ್ನೆ ಒಂದೇ ದಿನ 53,920 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ನಿನ್ನೆ ಒಂದೇ ದಿನದಲ್ಲಿ 11,13,209 ಸ್ಯಾಂಪಲ್ಗಳ ಪರೀಕ್ಷೆ ನಡೆಸಲಾಗಿದ್ದು, ದೇಶದಲ್ಲಿ ಇದುವರೆಗೆ 11,65,42,304 ಕೊರೋನಾ ಟೆಸ್ಟ್ ನಡೆಸಲಾಗಿದೆ ಭಾರತೀಯ ವೈದಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇತ್ತ ನವದೆಹಲಿಯಲ್ಲಿ ಕೊರೋನಾದ ಮೂರನೇ ಅಲೆ ಶುರುವಾಗಿದ್ದು ನಿನ್ನೆ ಒಂದೇ ದಿನ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಆರು ಸಾವಿರ ಗಡಿ ಮುಟ್ಟುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ನಿನ್ನೆ 7 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 7, 178 ಪ್ರಕರಣ ದಾಖಲಾಗಿದ್ದು ಇದು ರಾಜ್ಯದಲ್ಲಿ ಇದುವರೆಗಿನ ಅತೀ ಹೆಚ್ಚು ಪ್ರಕರಣವಾಗಿದೆ. ಈ ಕುರಿತಂತೆ ದೆಹಲಿ ಹೈಕೋರ್ಟ್ ಕೂಡಾ ಕಳವಳ ವ್ಯಕ್ತಪಡಿಸಿದ್ದು , ದೆಹಲಿ ದೇಶದ ಕೊರೋನಾ ರಾಜಧಾನಿಯಾಗಲು ಹೊರಟಿದೆ. ಆದಷ್ಟು ಬೇಗ ಇತ್ತ ಗಮನಹರಿಸಿ ಎಂದು ಸರ್ಕಾರಕ್ಕೆ ಛಾಟಿ ಬೀಸಿದೆ.