ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪತ್ ರಾಜ್ ಇದ್ದಕ್ಕಿದ್ದಂತೆ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅವರನ್ನು ಪೊಲೀಸರೇ ಹುಡುಕಬೇಕು. ಅವರ ಕೆಲಸವನ್ನು ನಾನಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಸಂಪತ್ ರಾಜ್ ಎಲ್ಲೋ ಬಚ್ಚಿಟ್ಟುಕೊಂಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ, ಪೊಲೀಸರು ಇರೋದು ಯಾಕೆ? ಸರ್ಕಾರ ಇರೋದು ಯಾಕೆ? ಪೊಲೀಸರು ಎಲ್ಲಿದ್ದಾರೆ? ಪೊಲೀಸರು ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳೋದು ಸರಿಯಲ್ಲ. ಸಂಪತ್ ರಾಜ್ ಎಲ್ಲಿದ್ದಾರೆ ಅಂತ ಪೊಲೀಸರು ಹುಡುಕಬೇಕು, ಅವರನ್ನು ಪತ್ತೆ ಹಚ್ಚಬೇಕು. ಆ ಕೆಲಸವನ್ನು ಪ್ರತಿಪಕ್ಷದ ನಾಯಕರು, ಕಾಂಗ್ರೆಸ್ನವರು ಮಾಡಬೇಕಾ? ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 51ನೇ ಆರೋಪಿ ಸಂಪತ್ ರಾಜ್ ಅಕ್ಬೋಬರ್ 31ರಂದು ನಾಪತ್ತೆಯಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ಅವರನ್ನು ಹುಡುಕಲು ತಿಂಗಳುಗಳಿಂದ ಪೊಲೀಸರು ಪ್ರಯತ್ನಿಸುತ್ತಿದ್ದರೂ ಇನ್ನೂ ಅವರ ಸುಳಿವು ಸಿಕ್ಕಿಲ್ಲ. ಅವರನ್ನು ಪತ್ತೆಹಚ್ಚಲು ಪೊಲೀಸ್ ತಂಡವನ್ನು ಕೂಡ ರಚಿಸಲಾಗಿದೆ.