ಬೆಂಗಳೂರು: ಡ್ರಗ್ಸ್ ಮಾರಾಟ ಕೇಸ್ ಸಂಬಂಧ ಬಂಧಿತನಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಅವರನ್ನು ಸಿಸಿಬಿ ಪೊಲೀಸರು 9 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಅಂಚೆ ಕಚೇರಿಗೆ ವಿದೇಶದಿಂದ 500 ಗ್ರಾಂ ಹೈಡ್ರೊ ಗಾಂಜಾ ಪಾರ್ಸೆಲ್ನಲ್ಲಿ ಬಂದಿದ್ದು ಅದನ್ನು ಕೆಂಪೇಗೌಡ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಈ ಸಂಬಂಧ ಸುಜಯ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ್ದ ಮಾಹಿತಿ ಮೇರೆಗೆ ಹೇಮಂತ್ ಹಾಗೂ ಸುನೇಶ್ನನ್ನು ಗೋವಾದಲ್ಲಿ ಸೆರೆಹಿಡಿಯಲಾಗಿತ್ತು.
ಈ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಬಂಧಿಸಿ, ವಿಚಾರಣೆಗಾಗಿ ಕೆಂಪೇಗೌಡ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದರು.ಪ್ರಕರಣ ಗಂಭೀರ ಸ್ವರೂಪವಾಗಿದ್ದು ಹೆಚ್ಚಿನ ತನಿಖೆಯ ಸಲುವಾಗಿ ಸಿಸಿಬಿ ತನಿಖೆಗೆ ವಹಿಸಲಾಗಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ, ಸುಜಯ್, ಸುನೀಶ್, ಹೇಮಂತ್ ಸೇರಿ ಎಲ್ಲ 8 ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ಆರೋಪದಡಿ ಸದಾಶಿವನಗರ ಠಾಣೆ ಹೆಡ್ ಕಾನ್ಸ್ಟೆಬಲ್ ಪ್ರಭಾಕರ್ ಎಂಬಾತನನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ‘ದರ್ಶನ್ ಭಾಗಿ ಬಗ್ಗೆ ಪುರಾವೆ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ದರ್ಶನ್ ಹಾಗೂ ಇತರೆ ಆರೋಪಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದ ನಂತರವೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ತಿಳಿಸಿದರು.
ನವೆಂಬರ್ 4 ರಂದು ಡಾರ್ಕ್ ನೆಟ್ ವೆಬ್ ಮೂಲಕ ನಗರಕ್ಕೆ ಹೈಡ್ರೋ ಗಾಂಜಾ ತರಿಸಿದ್ದ ಸುಜಯ್ ಸುನೀಶ್ ಮತ್ತು ಹೇಮಂತ್ ಅದನ್ನ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ ನಲ್ಲಿ ತೆಗೆದುಕೊಳ್ಳಲು ಪ್ರಯತ್ನ ನಡೆಸಿದ್ದರು.