ಬೆಂಗಳೂರು : ಮಾಜಿ ಮೇಯರ್ ಸಂಪತ್ ರಾಜ್ ಗೆ ಕೊರೊನಾ ಪಾಸಿಟಿವ್ ಎಂಬ ಸುದ್ದಿ ಸುಳ್ಳು ಎನ್ನಲಾಗುತ್ತಿದೆ. ಯಾಕಂದ್ರೆ ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಇಡೀ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬೆನ್ನತ್ತಿದ್ದರು.
ಆದ್ರೆ ಈ ಮಧ್ಯೆ ಸಂಪತ್ ರಾಜ್ ಸಿಸಿಬಿ ಪೊಲೀಸರಿಗೆ ಸಿಗದೆ ಆರೋಗ್ಯ ಸರಿ ಇಲ್ಲ ಎನ್ನುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಅವರು ಆರೋಗ್ಯ ಸರಿ ಇಲ್ಲ ಎಂಬ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದಾರೆಂಬ ಅನುಮಾನ ಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡವನ್ನು ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಭೇಟಿಯಾಗಿ ಕೆಲ ಮಾಹಿತಿಗಳನ್ನು ಕಲೆ ಹಾಕಿದೆ ಎನ್ನಲಾಗಿದೆ.
ಸಂಪತ್ ರಾಜ್ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಆಸ್ಪತ್ರೆಯ ವೈದ್ಯರು ಸಂಪತ್ ರಾಜ್ ಗೆ ಹುಷಾರಿಲ್ಲ ಎಂಬ ವರದಿಯನ್ನೇ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಮೂರನೇ ಬಾರಿ ಸಂಪತ್ ರಾಜ್ ಗೆ ಕೊರೊನಾ ಪಾಸಿಟಿವ್ ಇದೆ ಎಂದು ವೈದ್ಯರು ಸಿಸಿಬಿಗೆ ತಿಳಿಸಿದ್ದರಂತೆ.
ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಅನುಮಾನ ಮೂಡಿದ್ದು, ಸಂಪತ್ ರಾಜ್ ಆರೋಗ್ಯದ ಬಗ್ಗೆ ತಾವೇ ಖುದ್ದು ಮಾಹಿತಿ ಪಡೆಯಲು ನಿರ್ಧರಿಸಿ, ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟು, ಸಂಪತ್ ರಾಜ್ ಗೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆ ವೈದ್ಯರ ವಿಚಾರಣೆ ನಡೆಸಿದ್ದಾರೆ. ಪರಿಶೀಲನೆ ನಡೆಸಲು ಹೋದಾಗ ಸಂಪತ್ ರಾಜ್ಗೆ ಕೊರೊನಾ ಇದೆ ಎಂದು ಸುಳ್ಳು ವರದಿ ನೀಡಿರುವುದು ಗೊತ್ತಾಗಿದೆ ಎನ್ನಲಾಗಿದೆ.
ಈ ಎಲ್ಲಾ ಮಾಹಿತಿಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸಿಸಿಬಿ ಪೊಲೀಸರಿಗೆ ನೀಡಲಿದ್ದಾರಂತೆ.