ಬೆಂಗಳೂರು: ನಗರದಲ್ಲಿ ಕೋವಿಡ್ 19 ಕಾಟ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹಲವಾರು ಕಠಿಣ ನಿಯಮಗಳನ್ನ ಜಾರಿ ಮಾಡಿ ಇದೀಗಾಗಲೇ ಆದೇಶ ಹೊರಡಿಸಿದೆ. ಇದರಲ್ಲಿ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡುವುದು ಕಡ್ಡಾಯ ಎಂಬ ಆದೇಶವೂ ಸೇರಿದೆ.ಆದರೆ ಮಾಸ್ಕ್ ಧಾರಣೆ ಈ ನಿಯಮ ಉಲ್ಲಂಘಿಸಿದ ಜನರಿಂದ ಇದೀಗ 3 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಕೊರೋನಾ ನಿಯಂತ್ರಿಸಲು ಬಿಬಿಎಂಪಿ ಮಾಸ್ಕ್ ಧರಿಸದವರಿಂದ ದಂಡ ವಸೂಲು ಮಾಡಲು ಮಾರ್ಷಲ್ ಗಳನ್ನು ನಿಯೋಜಿಸಿತ್ತು. ತದನಂತರ ಮಾರ್ಷಲ್ ಗಳ ಜೊತೆ ಜನತೆ ಕಾದಾಟಕ್ಕಿಳಿಯುವುದನ್ನು ಮನಗಂಡು ಪೊಲೀಸರಿಗೂ ದಂಡ ವಸೂಲಾತಿ ಮಾಡಲು ಅವಕಾಶ ಕಲ್ಪಿಸಿತ್ತು. ಈ ವಿಚಾರವಾಗಿ ಬೆಂಗಳೂರು ಪೊಲೀಸ್ ನಗರ ಆಯುಕ್ತರಾದ ಕಮಲ್ ಪಂತ್ ಅವರು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೂ ಕೆಲ ದಿನಗಳ ಹಿಂದಷ್ಟೇ ಸುತ್ತೋಲೆ ಕಳುಹಿಸಿದ್ದರು.

ಇದೀಗ ₹3 ಕೋಟಿ ದಂಡ ವಸೂಲಿ ಮಾಡಲಾಗಿದೆ’ ಎಂದು ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ ನೀಡಿದೆ. ಮಾಸ್ಕ್ ಧರಿಸದ 1.25 ಲಕ್ಷ ಜನರಿಂದ ₹2.66 ಕೋಟಿ ಸಂಗ್ರಹಿಸಲಾಗಿದೆ. ಅಂತರ ಕಾಪಾಡದ ಜನರಿಂದ ₹31.5 ಲಕ್ಷ ಸಂಗ್ರಹಿಸಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸದ ಸುಮಾರು 170 ಸಂಸ್ಥೆಗಳನ್ನು ಮುಚ್ಚಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟಿಗೆ ವಿವರಿಸಿದೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಾದ್ಯಂತ 5,121 ಹೊಸ ಪ್ರಕರಣಗಳು ದಾಖಲಾಗಿವೆ, 43 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 3,505 ಜನ ಗುಣಮುಖರಾಗಿದ್ದಾರೆ. ಒಟ್ಟು 60,197 ಕೊರೊನಾ ವೈರಸ್ ಸೋಂಕು ಸಕ್ರಿಯ ಪ್ರಕರಣಗಳಿವೆ.