ನವದೆಹಲಿ : ವಿಶ್ವದ ದೊಡ್ಡಣ್ಣ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬರೆದಿರುವ ಅವರ ಆತ್ಮಕಥೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಇದೀಗ ಭಾರತೀಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣ ಕಂಡುಬಂದಿದೆ.ಒಬಾಮ ಅವರು ತಮ್ಮ ಆತ್ಮಕಥೆಯಲ್ಲಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಏಕೆ ಬಿಟ್ಟುಕೊಟ್ಟರು ಎಂಬುದನ್ನು ವಿವರಿಸಿದ್ದು, ಇದು ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ತುಂಬಾ ಮೃದು ಸ್ವಭಾವ ಹೊಂದಿದ್ದೇ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ದಕ್ಕಿಲು ಸಹಾಯವಾಯಿತು. ಇಂತಹ ಮೃದು ಸ್ವಭಾವದವರು ಪ್ರಧಾನಿ ಪಟ್ಟ ಅಲಂಕರಿಸಿದರೂ ತನ್ನ ರಾಜಕೀಯ ಭವಿಷ್ಯ ಜೊತೆಗೆ ತನ್ನ ಮಕ್ಕಳ ರಾಜಕೀಯ ಭವಿಷ್ಯಕ್ಕೂ ಯಾವುದೇ ತೊಂದರೆ ಬರುವುದಿಲ್ಲ ಎಂಬುದನ್ನ ಅರಿತೇ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಅವರನ್ನ ಪ್ರಧಾನಿ ಮಾಡಿದರು ಎಂದು ಬರಾಕ್ ಒಬಾಮ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞರಲ್ಲಿ ಒಬ್ಬರಾಗಿದ್ದ ಮನಮೋಹನ್ ಸಿಂಗ್ ಭಾರತದ ಆರ್ಥಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ದೇಶದ ಜನತೆಯನ್ನು ದಿಗ್ಬ್ರಮೆಗೊಳಿಸಿದ ಮುಂಬೈ ದಾಳಿ ಪ್ರಕರಣದ ಬಳಿಕ ಪಾಕ್ ದೇಶದ ವಿರುದ್ಧ ಪ್ರತೀಕಾರಕ್ಕೆ ನಿರಾಕರಿಸಿದ್ದರು. ಇದು ಮನಮೋಹನ್ ಸಿಂಗ್ ಅವರ ರಾಜಕೀಯ ಜೀವನಕ್ಕೆ ಮುಳುವಾಯಿತು ಎಂದು ಅಮೇರಿಕಾದ ಮಾಜಿ ಅಧ್ಯಕ್ಷರು ತಮ್ಮ ‘ ಎ ಪ್ರಾಮಿಸ್ಡ್ ಲ್ಯಾಂಡ್’ ನಲ್ಲಿ ಉಲ್ಲೇಖಿಸಿದ್ದಾರೆ.
2009ರಿಂದ 2017ರವರೆಗೆ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದರು. 2013-14ರವರೆಗೆ ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಒಬಾಮಾ ನಿಕಟ ಸಂಪರ್ಕದಲ್ಲಿದ್ದರು.ಆ ಸಂದರ್ಭದಲ್ಲಿ ಇವರೆಲ್ಲರೂ ವ್ಯವಹರಿಸಿದ ರೀತಿಯ ಕುರಿತು ತಮ್ಮ ಅನಿಸಿಕೆಗಳನ್ನು ನೇರವಾಗಿ ಒಬಾಮಾ ತಮ್ಮ ಆತ್ಮಕಥೆ ‘ ಎ ಪ್ರಾಮಿಸ್ಡ್ ಲ್ಯಾಂಡ್’ನಲ್ಲಿ ಹಂಚಿಕೊಂಡಿದ್ದಾರೆ.