ಶಿವಮೊಗ್ಗ : ಬಿಎಸ್ ಯಡಿಯೂರಪ್ಪ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ, ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಧಾನಿ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಬಸವನ ಗೌಡ ಯತ್ನಾಳ್ ಹೇಳಿದ್ದರು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಆತ್ಮರತಿ ಕಾಯಿಲೆ ಇದೆ ಎಂದಿದ್ದಾರೆ.
ಯತ್ನಾಳ್ ಗೆ ಯಾವಾಗ ರಾಜಕೀಯವಾಗಿ ಅಭದ್ರತೆ ಕಾಡುತ್ತೋ ಆಗ ಇಂತಹ ಹೇಳಿಕೆಯನ್ನು ನೀಡುತ್ತಾರೆ. ತಾವು ಕಳೆದು ಹೋಗುತ್ತಿದ್ದೇನೆ ಅನಿಸುತ್ತೋ ಆಗ ಇಂತಹ ಅಸಂಬದ್ಧ ಮತ್ತು ಅಸಂದರ್ಭಿಕ ಮಾತುಗಳನ್ನು ಆಡುತ್ತಾರೆ. ಕಾಯಿಲೆಗಳಲ್ಲಿ ಆತ್ಮರತಿ ಎಂಬ ಕಾಯಿಲೆ ಇದೆ. ಇದು ಯತ್ನಾಳ್ ಗೆ ಬಂದಿದೆ. ತನ್ನನ್ನು ತಾನು ವೈಭವಿಕರಿಸಿಕೊಂಡು ಹೇಳಿಕೆ ನೀಡುವ ಖಾಯಿಲೆ ಯತ್ನಾಳ್ ಗೆ ಇದೆ ಅಂತ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯತ್ನಾಳ್ ಮತ್ತು ನಾನು ಆತ್ಮೀಯ ಸ್ನೇಹಿತರು. ಆದರೆ, ಅವರಿಗಿರುವ ಮಾನಸಿಕ ಖಾಯಿಲೆ ಅವರಿಗೆ ಅಪಾಯಕಾರಿಯಾಗಿದೆ. ಸ್ನೇಹಿತನ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ, ಅವರಿಗೆ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಅವರು ಶಿವಮೊಗ್ಗಕ್ಕೆ ಆದಷ್ಟು ಬೇಗನೆ ಬರಲಿ ಎಂದು ಆಹ್ವಾನಿಸುತ್ತೇನೆ. ನಮ್ಮಲ್ಲಿ ಮೂರ್ನಾಲ್ಕು ಜನ ಒಳ್ಳೆಯ ವೈದ್ಯರಿದ್ದಾರೆ, ಇಲ್ಲಿ ಚಿಕಿತ್ಸೆ ಕೊಡಿಸುತ್ತೇನೆ ಎಂದರು.
ನನ್ನ ಜೊತೆ ಅವರು ಇನ್ನಷ್ಟು ದಿನ ಇರಬೇಕು. ಆತ್ಮರತಿಯ ರೋಗದಿಂದ ನರಳುತ್ತಿರುವ ಮಾನಸಿಕ ಖಾಯಿಲೆಯಿಂದ ಹೊರತರಲು ಚಿಕಿತ್ಸೆ ಅಗತ್ಯವಿದೆ. ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೇ, ಪಕ್ಷದ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಚುನಾವಣೆ ಬಳಿಕ ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸುತ್ತದೆ ಎಂದು ತಿಳಿಸಿದರು.