ವಿಜಯಪುರ: ಸಿಎಂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ. ಅವರನ್ನು ಕಂಡರೆ ಹೈಕಮಾಂಡ್ಗೂ ಆಗಲ್ಲ ಅಂತ ಯಾವಾಗಲೂ ಸಿಎಂ ಯಡಿಯೂರಪ್ಪ ವಿರುದ್ಧವಾಗೇ ಮಾತನಾಡುತ್ತಿದ ಶಾಸಕ ಮೊದಲ ಬಾರಿಗೆ ಸಿಎಂ ಪರ ಮಾತನಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿರುವ ಯತ್ನಾಳ್, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮರಾಠಾ ಪ್ರಾಧಿಕಾರ ರಚಿಸಲು ಮುಂದಾಗಿರುವ ಮುಖ್ಯಮಂತ್ರಿಯವರನ್ನು ನಾನು ಅಭಿನಂದಿಸುತ್ತೇನೆ. ಕನ್ನಡಪರ ಹೋರಾಟಗಾರರು ಅದು ಹೇಗೆ ವಿಜಯಪುರದಲ್ಲಿ ಬಂದ್ ನಡೆಸುತ್ತಾರೋ, ನಾನೂ ನೋಡುತ್ತೇನೆ”ಎಂದು ಸವಾಲು ಹಾಕಿದರು. ಬೆಳಗಾವಿ, ಕಾರವಾರದ ವಿಚಾರದಲ್ಲಿ ಶಿವಸೇನೆ ಮತ್ತು ಅಜಿತ್ ಪವಾರ್ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ನಮ್ಮ ಒಂದಿಂಚು ಜಾಗವೂ ಬೇರೆಯವರಿಗೆ ಹೋಗುವುದಿಲ್ಲ ಎಂದು ಹೇಳಿದರು.
ಕನ್ನಡಪರ ಹೋರಾಟಗಾರರು ಬಂದ್ ಗೆ ಕರೆ ನೀಡಿದ್ದಾರೆ. ಅವರೆಲ್ಲಾ ನಕಲಿ, ರೋಲ್ಕಾಲ್ ಹೋರಾಟಗಾರರು. ಕನ್ನಡದ ಹೆಸರಿನಲ್ಲಿ ಸುಮ್ಮನೆ ಹೋರಾಟ ಸಲ್ಲದು. ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ್ ನಾಗರಾಜ್ ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡ ಎಷ್ಟು ಅನುದಾನ ಪಡೆದಿದ್ದಾರೆ”ಎಂದು ಯತ್ನಾಳ್ ಗರಂ ಆದರು.
ಬೆಂಗಳೂರಿನಲ್ಲಿ ಕುಳಿತು ಆರ್ಭಟಿಸಿದರೆ ನಾವೇನೂ ಭಯ ಪಡುವುದಿಲ್ಲ. ವಾಟಾಳ್ ನಾಗರಾಜ್ ಅವರಿಂದ ನಾನೇನು ಕಲಿಯಬೇಕಾಗಿಲ್ಲ. ಸಂಘಟನೆಗಳ ಒತ್ತಡಕ್ಕೆ ಮಣಿದು ಸಿಎಂ, ಪ್ರಾಧಿಕಾರ ಹಿಂಪಡೆದರೆ, ದೊಡ್ಡ ಅನಾಹುತವಾಗುತ್ತದೆ”ಎನ್ನುವ ಎಚ್ಚರಿಕೆಯನ್ನು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದರು.
ಮರಾಠಾ ಪ್ರಾಧಿಕಾರ ರಚಿಸಿದರೆ ಕನ್ನಡಿಗರ ಮತ ಹೋಗುತ್ತದೆ ಎನ್ನುವುದರ ಬಗ್ಗೆ ಸಿಎಂ ಚಿಂತಿಸಬಾರದು. ನಾವು ಮೊದಲು ಹಿಂದೂಗಳು, ನಮ್ಮ ರಕ್ಷಣೆ ಮಾಡಿದ ಶಿವಾಜಿ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ಒದಗಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಿಎಂ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ಸಿಎಂ ಅವರನ್ನು ಸಮರ್ಥಿಸಿಕೊಂಡರು.