ಬೆಂಗಳೂರು : ನವೆಂಬರ್ 3 ರಂದು ಆರ್ ಆರ್ ನಗರ ಮತ್ತು ತುಮಕೂರಿನ ಶಿರಾ ಬೈ ಎಲೆಕ್ಷನ್ ನಡೆಯುತ್ತಿದೆ. ಉಳಿದಿರುವ ಕಡಿಮೆ ಸಮಯದಲ್ಲಿ ಅಭ್ಯರ್ಥಿಗಳ ಪರ ತಮ್ಮ ತಮ್ಮ ಪಕ್ಷದವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಸಿಎಂ ಯಡಿಯೂರಪ್ಪ ಅವರು ಪ್ರಚಾರ ಕಾರ್ಯಕ್ಕೆ ಬರಲ್ಲ ಅಂತ ಹೇಳಿದ್ರು. ಆದ್ರೆ ಅವರ ನಿರ್ಧಾರ ಬದಲಾಯಿಸಿಕೊಂಡಿದ್ದು, ಪ್ರಚಾರಕ್ಕೆ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದಾರೆ.
ಇದೇ ಶುಕ್ರವಾರ ಶಿರಾದಲ್ಲಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಅ. 31 ರಂದು ಆರ್ ಆರ್ ನಗರದಲ್ಲಿ ಸಿಎಂ ಪ್ರಚಾರ ನಡೆಸಲಿದ್ದಾರೆ.
ಅ. 30 ರಂದು ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಸಿಎಂ ಮತಯಾಚನೆ ಮಾಡಲಿದ್ದಾರೆ. ಶಿರಾದ ಮದಲೂರು, ಶಿರಾ ಟೌನ್ನಲ್ಲಿ ಪ್ರಚಾರ ಮಾಡಲಿದ್ದಾರೆ. ಅ. 31 ರಂದು ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಬಿ ಎಸ್ ಯಡಿಯೂರಪ್ಪ ಪ್ರಚಾರ ಕೈಗೊಳ್ಳಲಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪ ಎರಡು ಕ್ಷೇತ್ರಗಳಲ್ಲೂ ಒಂದೊಂದು ದಿನ ಪ್ರಚಾರ ಕೈಗೊಳ್ಳಲಿದ್ದಾರೆ.
ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನ. 3 ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಕೂಡ ನ. 3 ರಂದು ಉಪಚುನಾವಣೆ ಘೋಷಿಸಲಾಗಿದೆ. ಆರ್.ಆರ್ ನಗರದ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸ್ಪರ್ಧಿಸಲಿದ್ದಾರೆ. ಆರ್ಆರ್ ನಗರ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕಿಳಿಯಲಿದ್ದಾರೆ. ಆರ್ಆರ್ ನಗರ ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಸ್ಪರ್ಧಿಸಲಿದ್ದಾರೆ.