ಬೆಂಗಳೂರು : ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನವನ್ನು ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲಿ ನಡೆಸಲು ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಡಿಸೆಂಬರ್ 7 ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸಂಪುಟ ತೀರ್ಮಾನ ಕೈಗೊಂಡಿದೆ. ಇಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅತ್ಯಂತ ತುರ್ತಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯಲ್ಲಿ ಕೆಲವೊಂದು ನಿರ್ಧಾರಗಳನ್ನು ಕೈಗೊಂಡಿದ್ದು ವಿಜಯನಗರ ಹೊಸ ಜಿಲ್ಲೆ ರಚನೆಗೆ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಜೊತೆಗೆ ಮರಾಠಾ ಸಮುದಾಯ ನಿಗಮ ಸ್ಥಾಪನೆಗೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದ್ದು, ಪ್ರಾಧಿಕಾರ ರಚನೆಯನ್ನು ಸರಕಾರ ಕೈಬಿಟ್ಟಿದೆ.
ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳುಬೇಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಆರಂಭವಾದ ಸಚಿವ ಸಂಪುಟ ಸಭೆ ಕೇವಲ 10 ನಿಮಿಷಗಳಲ್ಲಿಯೇ ಮುಕ್ತಾಯಗೊಂಡಿತು.
ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾಗೂ ಅತಿವೃಷ್ಟಿ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು. ಹೀಗಾಗಿ ಅಧಿವೇಶನವನ್ನು ಬೆಳಗಾವಿ ನಡೆಸಿದರೆ ಅಲ್ಲಿನ ಜನತೆಗೆ ಏನಾದರೂ ಉಪಯೋಗವಾಗುತ್ತದೆ ಎಂದು ಜನ ಆಶಿಸಿದ್ದರು. ಆದರೆ ಈ ಬಾರಿ ಕೋವಿಡ್-19 ನೆಪವೊಡ್ಡಿ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಗಿದೆ.