ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶ ಕೊಟ್ಟಿದ್ದ ಸರ್ಕಾರದ ಇದೀಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೂ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಬೆನ್ನಲ್ಲೇ ಲಿಂಗಾಯತ ಸಮುದಾಯದ ಸಚಿವರು ಮಾತ್ರವಲ್ಲದೆ ಕಾಂಗ್ರೆಸ್ ನಿಯೋಗವೂ ಸಹ ತಮ್ಮ ಸಮುದಾಯಕ್ಕೆ ಶೇ.16 ರಷ್ಟು ಮೀಸಲು ನೀಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿತ್ತು.
ಹೀಗಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಗಮ ಆರಂಭಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಾಂಗದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ. ಈ ಸಮಾಜದ ಅಭಿವೃದ್ದಿಗಾಗಿ ನಿಗಮದ ಅಗತ್ಯವಿದೆ. ಆದ್ದರಿಂದ ತಕ್ಷಣದಿಂದಲೇ ಜಾರಿ ಬರುವಂತೆ ಆದೇಶ ಹೊರಡಿಸಿಲಾಗಿದೆ.
ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ವಿಚಾರದಲ್ಲಿ ರಾಜ್ಯಾದ್ಯಂತ ಬೇಡಿಕೆ ಹೆಚ್ಚಾಗ್ತಿರುವ ಬೆನ್ನಲ್ಲೇ ಸರ್ಕಾರ ಈ ವಿಚಾರದಲ್ಲಿ ತುರ್ತು ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯದ ಮಠಾಧಿಪತಿಗಳಾಧಿಯಾಗಿ ಜನಪ್ರತಿನಿಧಿಗಳನ್ನೊಳಗೊಂಡ ಮೀಸಲಾತಿ ಹೋರಾಟ ಸಮಿತಿ ಆಗ್ರಹಕ್ಕೆ ಮಣಿದಿರುವ ಸರ್ಕಾರ ಅವರ ಬೇಡಿಕೆಗೆ ಅನುಗುಣವಾಗಿ ಮೊದಲ ಅಡಿ ಇಟ್ಟಿದೆ.
ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಲುವಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ಮಂಡಳಿ ತೆರೆಯಲು ಆದೇಶಿಸಿರುವ ಸಿಎಂ ಈ ವಿಚಾರದಲ್ಲಿ ಸ್ವಜಾತಿ ಪ್ರೇಮ ಮೆರೆದಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಶೇಕಡಾ 16% ಮೀಸಲಾತಿಗಾಗಿ ಆಗ್ರಹಿಸಿ ಕಳೆದ ಕೆಳ ತಿಂಗಳಿನಿಂದ ರಾಜ್ಯದಲ್ಲಿ ವಿವಿಧ ಹಂತದ ಹೋರಾಟಗಳು ನಡೆದಿದ್ದವು.