ಅಂಕಾರಾ: ಟರ್ಕಿ ಮತ್ತು ಗ್ರೀಕ್ ನಡುವಿನ ಪ್ರದೇಶದಲ್ಲಿ ಬಲವಾಗಿ ಭೂಕಂಪನ ಉಂಟಾಗಿದೆ. ಕಟ್ಟಡಗಳು ಧರೆಗುರುಳಿದ ಪರಿಣಾಮ ಸುಮಾರು 49 ಮಂದಿ ಮೃತಪಟ್ಟಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಸಂಭವಿಸಿದ ಭೂಕಂಪಕ್ಕೆ ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದುಬಿದ್ದಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಸ್ಥಳದಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾ ನಿರಂತರವಾಗಿ ನಡೆಯುತ್ತಿದೆ. ಇನ್ನು ಇಜ್ಮಿರ್ನಲ್ಲಿ ಆಂಬುಲೆನ್ಸ್ಗಳು, ಹೆಲಿಕಾಪ್ಟರ್ ಆಂಬುಲೆನ್ಸ್ಗಳು ಹಾಗೂ ವೈದ್ಯಕೀಯ ತಂಡ ಕಾರ್ಯ ನಿರ್ವಹಿಸುತ್ತಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.0 ದಾಖಲಾಗಿದೆ.
70 ವರ್ಷದ ಅಹ್ಮೆತ್ ಸಿಟಿಮ್ ಎಂಬವರನ್ನು ಭಾನುವಾರ ಅವಶೇಷಗಳಡಿಯಿಂದ ಹೊರತೆಗೆಯಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ತಿಳಿಸಿದ್ದಾರೆ.
ಟರ್ಕಿ, ಇಸ್ತಾನ್ಬುಲ್ ಮತ್ತು ಗ್ರೀಕ್ ರಾಜಧಾನಿ ಅಥೇನ್ಸ್ನಲ್ಲಿಯೂ ಶುಕ್ರವಾರ ಭೂಕಂಪನವಾಗಿದ್ದು, ಮೂರನೇ ದಿನವು ರಕ್ಷಣಾ ಪಡೆಯು ಶೋಧ ಕಾರ್ಯಾಚರಣೆ ಮುಂದುವರಿಸಿದೆ.