ವಾಷಿಂಗ್ಟನ್: ಮಾರಕ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಚಿಕಿತ್ಸೆ ಬಳಿಕ ಶ್ವೇತ ಭವನ ಪ್ರವೇಶಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅಮೆರಿಕದ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಟ್ರಂಪ್ ಶ್ವೇತ ಭವನ ಪ್ರವೇಶಿಸುತ್ತಲೇ ತಾವು ಧರಿಸಿದ್ದ ಮಾಸ್ಕ್ ತೆಗೆದು, ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಮುಂಬರುವ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಕಾರ್ಯದಲ್ಲಿ ತೊಡಗಿಸುವುದಾಗಿ ಹೇಳಿದರು.
ಡೊನಾಲ್ಡ್ ಟ್ರಂಪ್ ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಹೇಳಿದ್ದಾರೆ. ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಿಂದ ಸೇನಾ ಹೆಲಿಕಾಪ್ಟರ್ನಲ್ಲಿ ಶ್ವೇತಭವನಕ್ಕೆ ಮರಳಿದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇನ್ನು ಅಮೆರಿಕದಲ್ಲಿ ಈವರೆಗೂ 2,10,000 ಮಂದಿ ಕೊರೊನಾ ವೈರಸ್ಗೆ ಪ್ರಾಣ ತೆತ್ತಿದ್ದಾರೆ. ಅಧ್ಯಕ್ಷೀಯ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಹೊರಬಂದ ಡೊನಾಲ್ಡ್ ಟ್ರಂಪ್ ಅವರು ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.