ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಂತೆ ಇರುವ ತಾಳವಾಡಿ ತಾಲೂಕಿನ ಗುಮ್ಮಟಾಪುರದಲ್ಲಿ ಶತ ಶತಮಾನಗಳಿಂದಲೂ ಸಂಪ್ರದಾಯವೊಂದು ನಡೆದುಕೊಂಡು ಬಂದಿದೆ. ಸಗಣಿಯ ಗುಡ್ಡದಲ್ಲೇ ಹೊರಲಾಡಿ, ಎರಚಾಡಿಕೊಂಡು ಹಬ್ಬ ಆಚರಣೆ ಮಾಡುತ್ತಾರೆ. ಈ ರೀತಿ ಸಗಣಿ ಎರಚಾಡಿಕೊಂಡು ಆಡುವ ಕನ್ನಡಿಗರ ಹಬ್ಬವೇ ಗೊರೆಹಬ್ಬ. ಗೊರೆ ಹಬ್ಬಕ್ಕೆ ಕೊರೊನಾ ಕಾಟದ ನಡುವೆಯೂ ಸಾವಿರಾರು ಮಂದಿ ಸಾಕ್ಷಿಯಾಗಿದ್ದಾರೆ.
ಪ್ರತಿವರ್ಷದ ದೀಪಾವಳಿಯ ಬಲಿಪಾಡ್ಯಮಿ ಮಾರನೇದಿನ ನಡೆಯುವ ಈ ಆಚರಣೆ ಪರಸ್ಪರ ಸಹಬಾಳ್ವೆ ಬೆಸೆಯುತ್ತಾ ಬಂದಿದ್ದು, ಜಾತಿ ಬೇಧದ ಮನೋಭಾವ ಇಲ್ಲದೇ ಗ್ರಾಮದ ಪ್ರತಿಯೊಬ್ಬರಿಂದ ಸಗಣಿ ಶೇಖರಿಸಿ ಬಳಿಕ ಎರಚಾಡಲಿದ್ದಾರೆ. ದೀಪಾವಳಿ ಬರುವುದನ್ನೆ ಕಾಯುವ ಇಲ್ಲಿನ ಯುವಕರು ಪ್ರತಿ ವರ್ಷ ಬಲಿಪಾಡ್ಯಮಿಯ ಮರುದಿನ ಎಲ್ಲಿಲ್ಲದ ಹುಮ್ಮಸ್ಸಿನಿಂದ ಸಗಣಿ ಎರಚಾಡಿ ಸಂಭ್ರಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಗೊರೆಹಬ್ಬ ಪ್ರಸಿದ್ದಿಯಾಗುತ್ತಿದೆ.
ಸುಮಾರು ಎರಡು ಗಂಟೆಗಳ ಕಾಲ ನೂರಾರು ಯುವಕರು, ಮಕ್ಕಳು 5,10 ರಿಂದ 15 ಕೆಜಿ ತೂಕದ ಸಗಣಿ ಉಂಡೆಗಳನ್ನು ಒಬ್ಬರ ಮೇಲೆ ಒಬ್ಬರು ಎತ್ತಿಹಾಕಿ, ಸಗಣಿಯಲ್ಲಿ ಬಿದ್ದು ಹೊರಳಾಡಿ ಸಂಭ್ರಮಿಸಿದ್ದಾರೆ.
ಸುಮಾರು 300 ವರ್ಷಗಳ ಹಿಂದೆ ಇಲ್ಲಿಗೆ ದೇವರಗುಡ್ಡರೊಬ್ಬರು ಆಗಮಿಸಿ ಗುಮ್ಮಟಾಪುರದ ಗೌಡರ ಮನೆಯಲ್ಲಿ ವಾಸವಿರುತ್ತಾರೆ. ಕಾರಣಾಂತರದಿಂದ ದೇವರಗುಡ್ಡರು ಮರಣ ಹೊಂದುತ್ತಾರೆ. ನಿಧನ ಹೊಂದಿದ್ದ ದೇವರಗುಡ್ಡರು ಬೀರೇಶ್ವರಸ್ವಾಮಿಯಾಗಿ ಸಗಣಿಯಲ್ಲಿ ಉದ್ಬವವಾಗಿರುತ್ತಾರೆ ಎನ್ನುವುದು ಪ್ರತೀತಿ. ಬೀರೇಶ್ವರಸ್ವಾಮಿಯು ಗುಮ್ಮಟಾಪುರ ಗ್ರಾಮದ ಯುವಕನೊಬ್ಬನ ಮೈ ಮೇಲೆ ಆವಾಹನೆಯಾಗಿ ಗ್ರಾಮದಲ್ಲಿ ಎಲ್ಲರು ಶಾಂತಿ ಸಹಬಾಳ್ವೆಯಿಂದ ಸಹೋದರೆತೆಯಿಂದ ಜೀವನ ನಡೆಸಲು ಇನ್ನುಮುಂದೆ ಬಲಿಪಾಡ್ಯಮಿಯ ಮರುದಿನ ಎಲ್ಲರು ಸಗಣಿ ಎರಚಾಡಿಕೊಂಡು ಹಬ್ಬಆಚರಿಸಿ ಸಂತಸದಿಂದ ಇರುವಂತೆ ಹೇಳಿರುತ್ತಾರೆ ಎನ್ನುವುದು ಇಲ್ಲಿನವರ ನಂಬಿಕೆ.